ಕೆರೆಗಳಿಗೆ ಕೊಳಚೆ ನೀರು ಸೇರ್ಪಡೆ ತಡೆಯಲು ತುರ್ತು ಕ್ರಮ; ಸಮಗ್ರ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಲು ಸೂಚನೆ
ಬೆಂಗಳೂರು, ಜೂನ್ 1: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರು ಬೊಮ್ಮನಹಳ್ಳಿ ವಲಯದ ಪರಪ್ಪನ ಅಗ್ರಹಾರ ಕೆರೆ, ಹರಳೂರು ಕೆರೆ ಹಾಗೂ ಕುಡ್ಲು ದೊಡ್ಡಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆರೆಗಳ ಸಂರಕ್ಷಣೆ ಹಾಗೂ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದರು.
ಪರಿಶೀಲನೆ ವೇಳೆ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ಕೆರೆಗಳ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಆಯುಕ್ತರು ಕಳವಳ ವ್ಯಕ್ತಪಡಿಸಿದರು. ಕೊಳಚೆ ನೀರು ಕೆರೆಗಳಿಗೆ ಸೇರುವುದನ್ನು ತಡೆಯಲು ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊಳಚೆ ನೀರು ಸೇರುವ ಪ್ರದೇಶಗಳನ್ನು ಗುರುತಿಸಿ, ಸೂಕ್ತ ತಡೆಗೋಡೆಗಳು ಹಾಗೂ ಪರ್ಯಾಯ ವ್ಯವಸ್ಥೆಗಳನ್ನು ನಿರ್ಮಿಸುವ ಮೂಲಕ ಕೆರೆಗಳ ಮಾಲಿನ್ಯವನ್ನು ತಡೆಗಟ್ಟುವಂತೆ ಸೂಚಿಸಿದರು. ಕೆರೆಗಳ ಪರಿಸರ ಸಮತೋಲನ ಕಾಪಾಡುವುದು ಹಾಗೂ ನೀರಿನ ಗುಣಮಟ್ಟವನ್ನು ಸುಧಾರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕೆರೆಗಳಿಗೆ ಕೊಳಚೆ ನೀರು ಹರಿದುಬರುವುದನ್ನು ಸಂಪೂರ್ಣವಾಗಿ ತಡೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೈಗೊಂಡಿರುವ ಭೂಗತ ಒಳಚರಂಡಿ (UGD) ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ದೂರವಾಣಿ ಮೂಲಕ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಮಂಡಳಿ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಕೆರೆಗಳಿಗೆ ಯಾವುದೇ ರೀತಿಯ ಕೊಳಚೆ ನೀರು ಹರಿದುಬಾರದಂತೆ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯುಕ್ತರು ತಿಳಿಸಿದರು.
ಕೆರೆಗಳ ದೀರ್ಘಕಾಲೀನ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಪರಪ್ಪನ ಅಗ್ರಹಾರ, ಹರಳೂರು ಹಾಗೂ ಕುಡ್ಲು ದೊಡ್ಡಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತಾವಿತ ಅಭಿವೃದ್ಧಿ ಯೋಜನೆಯಲ್ಲಿ ಕೆರೆಗಳ ಸುತ್ತಲೂ ಬೇಲಿ ಅಳವಡಿಕೆ, ತಡೆಗೋಡೆ ನಿರ್ಮಾಣ, ಕೆರೆ ಗಡಿಭಾಗಗಳ ಬಲವರ್ಧನೆ ಹಾಗೂ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡಿರಬೇಕು ಎಂದು ತಿಳಿಸಿದರು.
ನಗರದ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಕೆರೆಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಪರಿಸರ ಸಂರಕ್ಷಣೆ, ಜೀವ ವೈವಿಧ್ಯತೆ ಕಾಪಾಡುವುದು ಹಾಗೂ ನಗರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.
ಪರಿಶೀಲನಾ ಸಂದರ್ಭದಲ್ಲಿ ಮುಖ್ಯ ಅಭಿಯಂತರ ಕೆ.ವಿ. ರವಿ, ಕಾರ್ಯಪಾಲಕ ಅಭಿಯಂತರರಾದ ದೀಪಾ ಮತ್ತು ಉಷಾ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
