ಜುಲೈ 22ರಂದು ರಾಜಾಜಿನಗರ, ಬಸವೇಶ್ವರನಗರ, ನಾಗರಭಾವಿ, ಎಚ್ಎಸ್ಆರ್ ಲೇಔಟ್ ಸೇರಿ ನೂರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜು ವ್ಯತ್ಯಯ
ಬೆಂಗಳೂರು, ಜುಲೈ 21: ಕಾವೇರಿ ನೀರು ಸರಬರಾಜು ಯೋಜನೆಯ ನಾಲ್ಕನೇ ಹಂತ, ಮೊದಲ ಹಂತದ 1200 ಮಿಮೀ ವ್ಯಾಸದ ಮುಖ್ಯ ಕೊಳವೆಯ ಮೇಲಿರುವ 200 ಮಿಮೀ ಏರ್ ವಾಲ್ವ್ ಹಾಗೂ ಸ್ಲೂಯಿಸ್ ವಾಲ್ವ್ನಲ್ಲಿ ಉಂಟಾಗಿರುವ ಸೋರಿಕೆಯನ್ನು ತುರ್ತುವಾಗಿ ದುರಸ್ತಿ ಮಾಡುವ ಹಿನ್ನೆಲೆಯಲ್ಲಿ ಜುಲೈ 22ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಕಾಲ ಪಂಪಿಂಗ್ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ತಿಳಿಸಿದೆ.
ಇದರಿಂದ ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಬಸವೇಶ್ವರನಗರ, ನಂದಿನಿ ಲೇಔಟ್, ಯಶವಂತಪುರ, ಪ್ರಕಾಶನಗರ, ನಾಗರಭಾವಿ, ವಿಜಯನಗರ, ದಾಸರಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಲಗ್ಗೆರೆ, ಹೆಗ್ಗನಹಳ್ಳಿ, ಕೊಟ್ಟಿಗೆಪಾಳ್ಯ, ಅತ್ತಿಗುಪ್ಪೆ, ಚಂದ್ರ ಲೇಔಟ್, ನಾಯಂಡಹಳ್ಳಿ, ಗೋವಿಂದರಾಜನಗರ, ಅನ್ನಪೂರ್ಣೇಶ್ವರಿ ನಗರ, ಕೋಣನಕುಂಟೆ, ಯಲಚೇನಹಳ್ಳಿ, ಜೆ.ಪಿ.ನಗರ, ಅರಕೆರೆ, ಪಾಂಡುರಂಗ ನಗರ, ಎಚ್ಎಸ್ಆರ್ ಲೇಔಟ್, ಬೆಳ್ಳಂದೂರು, ಕೋರಮಂಗಲ, ಬಿಟಿಎಂ 2ನೇ ಹಂತ, ಎನ್.ಎಸ್. ಪಾಳ್ಯ, ತಾವರೆಕೆರೆ, ಓಲ್ಡ್ ಮಡಿವಾಳ ಮತ್ತು ಸಿಲ್ಕ್ ಬೋರ್ಡ್ ಕ್ವಾರ್ಟರ್ಸ್ ಸೇರಿದಂತೆ ನೂರಕ್ಕೂ ಹೆಚ್ಚು ಬಡಾವಣೆಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಗತ್ಯ ಬಳಕೆಗೆ ಬೇಕಾದಷ್ಟು ನೀರನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಳ್ಳುವಂತೆ ಸಾರ್ವಜನಿಕರಲ್ಲಿ ಮಂಡಳಿ ಮನವಿ ಮಾಡಿದೆ.
ಕೊಳವೆಯ ಸೋರಿಕೆಯನ್ನು ತಡೆದು ನೀರು ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಬಿಡಬ್ಲ್ಯುಎಸ್ಎಸ್ಬಿ ಮನವಿ ಮಾಡಿದೆ.