ಜೆ.ಪಿ. ನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಇ-ಖಾತಾ ಮೇಳದಲ್ಲಿ ಅಧಿಕಾರಿಗಳು. ಚಿತ್ರ: ಒದಗಿಸಲಾಗಿದೆ
ಬೆಂಗಳೂರು: ಇ-ಖಾತಾ ಮೇಳದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಒಂದೇ ದಿನ 254 ಹೊಸ ಅರ್ಜಿಗಳನ್ನು ಸ್ವೀಕರಿಸಿ 93 ಅರ್ಜಿಗಳನ್ನು ವಿಲೇವಾರಿ ಮಾಡಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ. ಜೆ.ಪಿ. ನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ನಡೆದ ಮೇಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಈ ಮಾಹಿತಿ ನೀಡಿದರು. ಸಾರ್ವಜನಿಕರ ಮನೆಬಾಗಿಲಿಗೆ ಸೇವೆ ಕಲ್ಪಿಸುವ ಉದ್ದೇಶದ ‘ನನ್ನ ಇ-ಖಾತಾ, ನನ್ನ ಹಕ್ಕು’ ಅಭಿಯಾನದ ಭಾಗವಾಗಿ ಈ ಮೇಳ ಆಯೋಜಿಸಲಾಗಿತ್ತು.
ಮ್ಯಾನುಯಲ್ ಖಾತಾದಿಂದ ಇ-ಖಾತಾಗೆ ಬದಲಾವಣೆ, ಹೊಸ ಖಾತಾ ನೋಂದಣಿ ಮತ್ತು ತಿದ್ದುಪಡಿಗಾಗಿ ನಾಗರಿಕರು ಸಲ್ಲಿಸುತ್ತಿರುವ ಅರ್ಜಿಗಳ ಪ್ರಕ್ರಿಯೆಯನ್ನು ಆಯುಕ್ತರು ಪರಿಶೀಲಿಸಿದರು. ಸಾರ್ವಜನಿಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳದಲ್ಲೇ ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಕ್ಷಣವೇ ಇ-ಖಾತಾ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇ-ಖಾತಾ ಅರ್ಜಿಗಳ ಪೈಕಿ 108 ಸ್ವೀಕೃತವಾಗಿದ್ದು, ಹಿಂದಿನ ಒಂದು ಬಾಕಿ ಅರ್ಜಿ ಸೇರಿ ಒಟ್ಟು 26 ವಿಲೇವಾರಿಯಾಗಿವೆ; 83 ಬಾಕಿ ಇವೆ. ಖಾತಾ ವರ್ಗಾವಣೆ (ಮ್ಯುಟೇಷನ್) ವಿಭಾಗದಲ್ಲಿ 21 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ ಬಾಕಿ ಅರ್ಜಿಗಳು ಸೇರಿ ಒಟ್ಟು 21 ವಿಲೇವಾರಿಯಾಗಿದ್ದು, 14 ಬಾಕಿ ಉಳಿದಿವೆ. ಖಾತಾ ತಿದ್ದುಪಡಿ ಕೋರಿ 96 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಿಂದಿನ 4 ಬಾಕಿ ಅರ್ಜಿಗಳೊಂದಿಗೆ ಒಟ್ಟು 42 ವಿಲೇವಾರಿಯಾಗಿ 58 ಬಾಕಿ ಇವೆ.
ಬಿ ಖಾತಾದಿಂದ ಎ ಖಾತೆಗೆ ಬದಲಾವಣೆ ಕೋರಿ 13 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 4 ಬಾಕಿ ಅರ್ಜಿಗಳ ಪೈಕಿ 4 ವಿಲೇವಾರಿಯಾಗಿ 13 ಬಾಕಿ ಇವೆ. ಹೊಸ ಖಾತೆಗೆ ಸಂಬಂಧಿಸಿದಂತೆ 16 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, ಪರಿಶೀಲನೆ ಬಾಕಿ ಇದೆ.
ಒಟ್ಟಾರೆ ಅಂದು ವಿವಿಧ ಸೇವೆಗಳಿಗೆ 254 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 23 ಬಾಕಿ ಅರ್ಜಿಗಳು ಸೇರಿ ಒಟ್ಟು 93 ವಿಲೇವಾರಿಯಾಗಿವೆ. 184 ಅರ್ಜಿಗಳು ಪರಿಶೀಲನೆಯಲ್ಲಿವೆ. ಇ-ಖಾತಾ, ಹೊಸ ಖಾತಾ ಮತ್ತು ಬಿ ಖಾತಾದಿಂದ ಎ ಖಾತೆಗೆ ಸಂಬಂಧಿಸಿದ 17 ಪ್ರತ್ಯೇಕ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮೇಳದ ವೇಳೆ ತಾಂತ್ರಿಕ ಸಹಾಯಕ್ಕಾಗಿ 2 ಇ-ಟಿಕೆಟ್‌ಗಳನ್ನು ದಾಖಲಿಸಲಾಗಿದೆ. ಒಟ್ಟು 305 ನಾಗರಿಕರು ಮೇಳದಲ್ಲಿ ಪಾಲ್ಗೊಂಡಿದ್ದರು.
ಅಂಜನಾಪುರ, ಯಲಚೇನಹಳ್ಳಿ, ಉತ್ತರಹಳ್ಳಿ, ಬೇಗೂರು, ಜೆ.ಪಿ. ನಗರ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿ, ಕೋರಮಂಗಲ, ಬಿ.ಟಿ.ಎಂ. ಲೇಔಟ್, ಅರಕೆರೆ ಮತ್ತು ಎಚ್.ಎಸ್.ಆರ್. ಲೇಔಟ್ ಸೇರಿದಂತೆ ಜಯನಗರ ಮತ್ತು ಬೊಮ್ಮನಹಳ್ಳಿ ವಲಯಗಳ 12 ಉಪವಿಭಾಗ ಕೇಂದ್ರಗಳಲ್ಲಿ ಏಕಕಾಲಕ್ಕೆ ಮೇಳ ಆಯೋಜಿಸಲಾಗಿತ್ತು.
ಮೇಳದಲ್ಲಿ ಭಾಗವಹಿಸಿದ ಸಾರ್ವಜನಿಕರ ಅರ್ಜಿಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲಿಸಿ ಪರಿಹಾರ ಒದಗಿಸಿದರು. ಖಾತಾ ಸೇವೆಗಳ ಪ್ರಕ್ರಿಯೆ, ದಾಖಲೆಗಳ ದೃಢೀಕರಣ ಮತ್ತು ಬಾಕಿ ಅರ್ಜಿಗಳ ಸ್ಥಿತಿಗತಿ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಪಾರದರ್ಶಕವಾಗಿ, ಕಾಲಮಿತಿಯೊಳಗೆ ಒದಗಿಸುವುದು ಹಾಗೂ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಆಯುಕ್ತರು ತಿಳಿಸಿದ್ದಾರೆ.
