ವಿಟ್ಟಸಂದ್ರ ಕಸ ವರ್ಗಾವಣೆ ಕೇಂದ್ರದಲ್ಲಿ ಕಾಂಪೋಸ್ಟ್ ಘಟಕ ಸ್ಥಾಪನೆಗೆ ಚಿಂತನೆ; 65 ಎಕರೆ ಸರ್ಕಾರಿ ಜಾಗ ಸರ್ವೇಗೆ ಸೂಚನೆ
ಬೆಂಗಳೂರು, ಜೂನ್ 8: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಅಪರ ಆಯುಕ್ತ ಡಾ. ನವೀನ್ ಕುಮಾರ್ ರಾಜು ಅವರು ಬೇಗೂರು ಹೋಬಳಿ ವ್ಯಾಪ್ತಿಯ ವಿಟ್ಟಸಂದ್ರ ಗ್ರಾಮದಲ್ಲಿರುವ ಪಾಲಿಕೆಯ ಕಸ ವರ್ಗಾವಣೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸುತ್ತಮುತ್ತಲಿನ ಸಂಪೂರ್ಣ ಸರ್ಕಾರಿ ಜಾಗದ ಸರ್ವೇ ಕಾರ್ಯವನ್ನು ತಕ್ಷಣ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ವಿಟ್ಟಸಂದ್ರ ಗ್ರಾಮದಲ್ಲಿ ಸುಮಾರು 65 ಎಕರೆ ಸರ್ಕಾರಿ ಜಾಗ ಲಭ್ಯವಿದ್ದು, ಅದರಲ್ಲಿ ಸುಮಾರು 4 ಎಕರೆ ಪ್ರದೇಶವನ್ನು ಕಸ ವರ್ಗಾವಣೆ ಕೇಂದ್ರಕ್ಕಾಗಿ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಜಾಗದ ಗಡಿಯನ್ನು ಗುರುತಿಸಿ ಸರ್ವೇ ಕಾರ್ಯ ನಡೆಸುವಂತೆ ಅಪರ ಆಯುಕ್ತರು ನಿರ್ದೇಶನ ನೀಡಿದರು.
ಕಸ ವರ್ಗಾವಣೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೂಳು ಹಾಗೂ ವಾಣಿಜ್ಯ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಿ ಅನ್ಯ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಲು ಸೂಚಿಸಿದರು. ಅಲ್ಲದೆ, ಅಕ್ರಮವಾಗಿ ಹೂಳು ಮತ್ತು ವಾಣಿಜ್ಯ ತ್ಯಾಜ್ಯ ಸುರಿಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಪ್ರದೇಶದಲ್ಲಿ ಆಧುನಿಕ ಕಾಂಪೋಸ್ಟ್ ಘಟಕ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಬಗ್ಗೆ ನಗರ ಪಾಲಿಕೆ ಚಿಂತನೆ ನಡೆಸಿದ್ದು, ಅದಕ್ಕಾಗಿ ಸುಮಾರು 2 ಎಕರೆ ಜಾಗದ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸುವ ಹಾಗೂ ಲ್ಯಾಂಡ್ಫಿಲ್ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕಾಂಪೋಸ್ಟ್ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಡಾ. ನವೀನ್ ಕುಮಾರ್ ರಾಜು ಸೂಚಿಸಿದರು.
ಸ್ಥಳ ಪರಿಶೀಲನೆ ವೇಳೆ ಡಿಜಿಎಂ ತನುಜಾ, ಎಜಿಎಂ ನೀಲಕಂಠ, ಎಜಿಎಂ ಶ್ವೇತಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ್ ಹಲದಕಟ್ಟಿ, ಬೇಗೂರು ವಿಭಾಗದ ಸಹಾಯಕ ಕಂದಾಯ ಅಧಿಕಾರಿ ನಾಗಭೂಷಣ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
