ಐಟಿ ವ್ಯವಸ್ಥೆ ಮೇಲ್ದರ್ಜೆಗೇರಿಸಲು ಜೂನ್ 10ರಿಂದ 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್ಲೈನ್ ಸೇವೆ ಸ್ಥಗಿತ
ಬೆಂಗಳೂರು, ಜೂನ್ 8: ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್) ಹಂತ-2ರ ಅಡಿಯಲ್ಲಿ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣ ಪ್ರದೇಶಗಳಿಗೆ ಹೊಸ ಐಪಿಡಿಎಸ್ ಐಟಿ ಅಪ್ಲಿಕೇಶನ್ ವಿಸ್ತರಿಸುವ ಹಿನ್ನೆಲೆಯಲ್ಲಿ ಜೂನ್ 10ರಿಂದ ಜೂನ್ 30, 2026ರವರೆಗೆ ಬೆಸ್ಕಾಂನ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಬಳಕೆಯಲ್ಲಿರುವ ಟಿಆರ್ಎಮ್ (TRM) ಸಾಫ್ಟ್ವೇರ್ ಬದಲಿಗೆ ಐಪಿಡಿಎಸ್ ಐಟಿ ಅಪ್ಲಿಕೇಶನ್ ಅಳವಡಿಸಲಾಗುತ್ತಿದ್ದು, ದತ್ತಾಂಶ ವರ್ಗಾವಣೆ ಕಾರ್ಯಕ್ಕಾಗಿ ಸುಮಾರು 21 ದಿನಗಳ ಕಾಲ ಹಲವು ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ.
ಈ ಅವಧಿಯಲ್ಲಿ ಹೊಸ ವಿದ್ಯುತ್ ಸಂಪರ್ಕ, ಹೆಸರು ವರ್ಗಾವಣೆ, ಲೋಡ್ ಹೆಚ್ಚಳ, ಗ್ರಾಹಕ ಸೇವಾ ಅರ್ಜಿಗಳು ಸೇರಿದಂತೆ ಬೆಸ್ಕಾಂನ ವಿವಿಧ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ.
ಆದರೆ ಗ್ರಾಹಕರು ಗೂಗಲ್ ಪೇ, ಫೋನ್ ಪೇ ಹಾಗೂ ಇತರೆ ತೃತೀಯ ಪಕ್ಷದ ಡಿಜಿಟಲ್ ಪಾವತಿ ವೇದಿಕೆಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಅವಕಾಶವಿರುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಆನ್ಲೈನ್ ಸೇವೆ ಸ್ಥಗಿತಗೊಳ್ಳಲಿರುವ ಪಟ್ಟಣಗಳಲ್ಲಿ ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆ ಸೇರಿವೆ.
ಈ ಪಟ್ಟಣಗಳ ಉಪವಿಭಾಗಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಟಿಆರ್ಎಮ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದು ಹೊಸ ಐಪಿಡಿಎಸ್ ಐಟಿ ವ್ಯವಸ್ಥೆ ಅಳವಡಿಕೆಗೆ ಅಗತ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಹೊಸ ತಂತ್ರಜ್ಞಾನ ವ್ಯವಸ್ಥೆಯು ಭವಿಷ್ಯದಲ್ಲಿ ಗ್ರಾಹಕ ಸೇವೆಗಳನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಉಂಟಾಗುವ ತಾತ್ಕಾಲಿಕ ಅನಾನುಕೂಲತೆಗೆ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
