ಹರಳೂರಿನ ರಾಜಕಾಲುವೆ ಜಾಗದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ. ಚಿತ್ರ: ಒದಗಿಸಲಾಗಿದೆ.
ಬೆಂಗಳೂರು: ಮಳೆನೀರು ಸರಾಗವಾಗಿ ಹರಿಯಲು ಹಾಗೂ ರಾಜಕಾಲುವೆಯ ನೈಸರ್ಗಿಕ ಹರಿವನ್ನು ಸಂರಕ್ಷಿಸಲು ಹರಳೂರಿನಲ್ಲಿ ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಕಾಂಪೌಂಡ್ ಮತ್ತು ಶೆಡ್ಗಳನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ತೆರವುಗೊಳಿಸಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಹರಳೂರು ಗ್ರಾಮದ ಸರ್ವೆ ನಂ. 2/1ರಲ್ಲಿ ಆರು ಗುಂಟೆ, ಅಂದಾಜು 6,534 ಚದರ ಅಡಿ ಬಿ-ಖರಾಬು ರಾಜಕಾಲುವೆ ಜಾಗವನ್ನು ಪಾಲಿಕೆಯ ಸುಪರ್ದಿಗೆ ಮರಳಿ ಪಡೆಯಲಾಗಿದೆ. ಈ ಜಾಗದ ಅಂದಾಜು ಮೌಲ್ಯ ₹6 ಕೋಟಿ ಎಂದು ಪಾಲಿಕೆ ತಿಳಿಸಿದೆ. ಇದು ಬೊಮ್ಮನಹಳ್ಳಿ ವಲಯ–2ರ ಹೆಚ್ಎಸ್ಆರ್ ವಿಭಾಗದ ಕೂಡ್ಲು ಉಪವಿಭಾಗದ ವ್ಯಾಪ್ತಿಯಲ್ಲಿದೆ.
ವಿಶೇಷ ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ
ರಾಜಕಾಲುವೆ ಹಾಗೂ ಹಳ್ಳದ ಖರಾಬು ಜಾಗದ ಒತ್ತುವರಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಮತ್ತು ಲಕ್ಷ್ಮಿನಾರಾಯಣ ರೆಡ್ಡಿ ಹಾಗೂ ಇತರರ ನಡುವಿನ ಪ್ರಕರಣ ಸಂಖ್ಯೆ NCR(E) CR/121/2024-25 ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿತ್ತು.
ಒತ್ತುವರಿದಾರರು ರಾಜಕಾಲುವೆ ಹಾಗೂ ಹಳ್ಳದ ಖರಾಬು ಜಾಗದಲ್ಲಿನ ಒತ್ತುವರಿಯನ್ನು ತೆರವುಗೊಳಿಸಬೇಕು; ಅವರು ತೆರವು ಮಾಡದಿದ್ದರೆ ಪಾಲಿಕೆಯೇ ಕಾರ್ಯಾಚರಣೆ ನಡೆಸಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು ಎಂದು ಪಾಲಿಕೆ ತಿಳಿಸಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಕೂಡ್ಲು ವಿಭಾಗದ ಅಭಿಯಂತರರು ಸರ್ವೇಯರ್ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಕಾಂಪೌಂಡ್ ಹಾಗೂ ಶೆಡ್ಗಳನ್ನು ತೆರವುಗೊಳಿಸಿ ಆರು ಗುಂಟೆ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆದರು.
ಮಳೆನೀರಿನ ಹರಿವಿನ ಸಂರಕ್ಷಣೆಗೆ ಒತ್ತು
ನಗರದಲ್ಲಿ ಮಳೆನೀರು ಸುಗಮವಾಗಿ ಹರಿದುಹೋಗಲು ಹಾಗೂ ರಾಜಕಾಲುವೆಯ ನೈಸರ್ಗಿಕ ಹರಿವನ್ನು ಕಾಪಾಡಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ರಾಜಕಾಲುವೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
