ಇಪಿಎಫ್‌ಒ ಬದಲಾವಣೆ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊದ ಒಂದು ಚಿತ್ರ. ಚಿತ್ರ: ಲಭ್ಯವಾದದ್ದು
ಬೆಂಗಳೂರು: ಭವಿಷ್ಯ ನಿಧಿ ಖಾತೆಯಲ್ಲಿ ಕಡ್ಡಾಯವಾಗಿ ಉಳಿಸಬೇಕಾದ ಕನಿಷ್ಠ ಮೊತ್ತದ ಪ್ರಮಾಣವನ್ನು ಶೇ 25ರಿಂದ ಶೇ 10ಕ್ಕೆ ಇಳಿಸಲು ಮತ್ತು ಉದ್ಯೋಗ ಕಳೆದುಕೊಂಡವರು ತಮ್ಮ ಪಿಎಫ್ ಹಣದ ಅಂತಿಮ ಇತ್ಯರ್ಥಕ್ಕಾಗಿ ಕಾಯಬೇಕಿದ್ದ ಅವಧಿಯನ್ನು 12 ತಿಂಗಳಿಂದ ಕೇವಲ 2 ತಿಂಗಳಿಗೆ ಇಳಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಗುರುವಾರ ಅನುಮೋದನೆ ನೀಡಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ನಿವೃತ್ತರಿಗೆ ವ್ಯವಸ್ಥಿತ ಹಿಂಪಡೆಯುವಿಕೆ ವ್ಯವಸ್ಥೆಗೂ ಸಿಬಿಟಿ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಈ ಬದಲಾವಣೆಗಳು ಬೊಮ್ಮನಹಳ್ಳಿಯ ಗಾರ್ಮೆಂಟ್ ಕಾರ್ಮಿಕರು ಎತ್ತಿದ್ದ ಆತಂಕಗಳಿಗೆ ಉತ್ತರ; ಈ ವಿಷಯವನ್ನು ತಾವು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಶಾಸಕ ಸತೀಶ್ ರೆಡ್ಡಿ ಹಾಗೂ ಕಾರ್ಮಿಕರ ನಿಯೋಗದೊಂದಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರ ಬಳಿ ಪ್ರಸ್ತಾಪಿಸಿದ್ದಾಗಿ ಸೂರ್ಯ ಹೇಳಿದರು.
ಹಿರಿಯ ಅಧಿಕಾರಿಗಳ ನೇತೃತ್ವದ ಕೇಂದ್ರ ಸಮಿತಿ ಬೊಮ್ಮನಹಳ್ಳಿಯ ಕಾರ್ಖಾನೆಗಳಿಗೆ ಭೇಟಿ ನೀಡಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ನೀತಿ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು ಎಂದು ಅವರು ತಿಳಿಸಿದರು.
ಇದು ಹೆಚ್ಚಿನ ಆರ್ಥಿಕ ಹೊಂದಾಣಿಕೆ ಮತ್ತು ಕಾರ್ಮಿಕ ಕಲ್ಯಾಣದತ್ತ ಸ್ವಾಗತಾರ್ಹ ಹೆಜ್ಜೆ ಎಂದು ಹೇಳಿದ ಅವರು, ದೇಶಾದ್ಯಂತದ ಕಾರ್ಮಿಕರಿಗೆ ಪರಿಹಾರ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಂಡವೀಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.
