ಅಕ್ರಮ ಪಾರ್ಕಿಂಗ್ ನಿಯಂತ್ರಣಕ್ಕೆ ಬೆಂಗಳೂರು ದಕ್ಷಿಣ ಪಾಲಿಕೆಯಿಂದ ಟೋಯಿಂಗ್ ವಾಹನಗಳ ನಿಯೋಜನೆ
ಬೆಂಗಳೂರು: ಅಕ್ರಮ ಪಾರ್ಕಿಂಗ್ ಹಾಗೂ ತ್ಯಜಿಸಲಾದ ವಾಹನಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಟೋಯಿಂಗ್ ವಾಹನಗಳನ್ನು ನಿಯೋಜಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿ ಇಂದು ಟೋಯಿಂಗ್ ವಾಹನಗಳ ಪರಿಶೀಲನೆ ನಡೆಸಲಾಗಿದ್ದು, ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ವಾಹನಗಳ ಕಾರ್ಯಪದ್ಧತಿಯನ್ನು ವೀಕ್ಷಿಸಿದರು.
ಟೆಂಡರ್ ಪಡೆದ ಗುತ್ತಿಗೆದಾರರು ನಿಗದಿತ ಮಾನದಂಡಗಳು ಹಾಗೂ ಅರ್ಹತೆಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಳ್ಳಲು ಈ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆಯ ನಂತರ ಮಾತನಾಡಿದ ಆಯುಕ್ತರು, ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಒಟ್ಟು 6 ಟೋಯಿಂಗ್ ವಾಹನಗಳನ್ನು ನಿಯೋಜಿಸಲಾಗಿದೆ ಎಂದರು. ವಾಹನಗಳ ಕಾರ್ಯಕ್ಷಮತೆ ಹಾಗೂ ಗುತ್ತಿಗೆದಾರರ ಅರ್ಹತೆಯನ್ನು ಪರಿಶೀಲಿಸಿದ ಬಳಿಕ, ಟ್ರಾಫಿಕ್ ಪೊಲೀಸರ ಮೇಲ್ವಿಚಾರಣೆಯಲ್ಲಿ ಮುಂದಿನ ವಾರದಿಂದ ಈ ವಾಹನಗಳು ರಸ್ತೆಗಿಳಿಯಲಿವೆ ಎಂದು ಹೇಳಿದರು.
ಅಕ್ರಮ ಪಾರ್ಕಿಂಗ್ನಿಂದ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಹಾಗೂ ರಸ್ತೆಗಳಲ್ಲಿ ಅಡ್ಡಿಪಡಿಸುವ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಈ ಟೋಯಿಂಗ್ ವಾಹನಗಳು ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದರು. ಸಾರ್ವಜನಿಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕ್ ಮಾಡಬಾರದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ಕೆ.ವಿ. ರವಿ, ಟ್ರಾಫಿಕ್ ಎಂಜಿನಿಯರಿಂಗ್ ಮೊಬಿಲಿಟಿ ಸೆಲ್ನ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
