ಜಿಬಿಎ ವ್ಯಾಪ್ತಿಯಲ್ಲಿ 88.95 ಲಕ್ಷ ಮತದಾರರು; ಅಂತಿಮ ಮತದಾರರ ಪಟ್ಟಿ ಬಿಡುಗಡೆ
ಬೆಂಗಳೂರು, ಏಪ್ರಿಲ್-18: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್ವಾರು ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 88,95,361 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಇಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 9 ರಂದು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಲ್ಲಿ ಕಂಡುಬಂದ ಲೋಪದೋಷಗಳನ್ನು ಸರಿಪಡಿಸಿ, ಅಗತ್ಯ ಬದಲಾವಣೆಗಳನ್ನು ಮಾಡಿ ಈಗ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳನ್ನು ಒಳಗೊಂಡಂತೆ ಒಟ್ಟು 5 ನಗರ ಪಾಲಿಕೆಗಳಲ್ಲಿ 369 ವಾರ್ಡ್ಗಳು ರಚನೆಯಾಗಿವೆ. ಪರಿಷ್ಕೃತ ಅಂತಿಮ ಪಟ್ಟಿಯಲ್ಲಿ 45,71,169 ಪುರುಷರು, 43,22,557 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿ ಒಟ್ಟು 88,95,361 ಮತದಾರರು ದಾಖಲಾಗಿದ್ದು, 8,023 ಮತಗಟ್ಟೆಗಳು ಇರಲಿವೆ ಎಂದು ವಿವರಿಸಿದರು.
ವಾರ್ಡ್ವಾರು ಮತದಾರರ ವಿವರಗಳಲ್ಲಿ ಬೆಂಗಳೂರು ದಕ್ಷಿಣ ನಗರಪಾಲಿಕೆಯ ವಾರ್ಡ್ ಸಂಖ್ಯೆ 51 (ಸುಭ್ರಮಣ್ಯಪುರ) ಅತ್ಯಧಿಕ 53,660 ಮತದಾರರನ್ನು ಹೊಂದಿದ್ದು, ಬೆಂಗಳೂರು ಪೂರ್ವ ನಗರಪಾಲಿಕೆಯ ವಾರ್ಡ್ ಸಂಖ್ಯೆ 24 (ವಿಜ್ಞಾನನಗರ) ಅತಿ ಕಡಿಮೆ 12,897 ಮತದಾರರನ್ನು ಹೊಂದಿದೆ. ಅಂತಿಮ ಪಟ್ಟಿಯಲ್ಲಿ ಒಟ್ಟು 2,833 ಮತದಾರರು ಹೆಚ್ಚಳ ಕಂಡಿದ್ದಾರೆ.
ಮತದಾರರ ಪಟ್ಟಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದ್ದು, ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ವಾರ್ಡ್ವಾರು ಅಂತಿಮ ಪಟ್ಟಿಯ ಪಿಡಿಎಫ್ ಆವೃತ್ತಿಯನ್ನು ಅಪ್ಲೋಡ್ ಮಾಡಲಾಗುತ್ತದೆ. ಮತದಾರರು ತಮ್ಮ EPIC ಸಂಖ್ಯೆ ಅಥವಾ ಹೆಸರಿನ ಮೂಲಕ ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳಬಹುದು.
ಮತದಾರರ ಅನುಕೂಲಕ್ಕಾಗಿ ಐದು ನಗರ ಪಾಲಿಕೆಗಳಿಗೆ ಸಹಾಯವಾಣಿ ಸಂಖ್ಯೆಗಳು ಪ್ರಕಟಿಸಲಾಗಿದೆ:
ಬೆಂಗಳೂರು ಕೇಂದ್ರ – 080-22975803
ಬೆಂಗಳೂರು ಉತ್ತರ – 080-22975936
ಬೆಂಗಳೂರು ದಕ್ಷಿಣ – 9480685704
ಬೆಂಗಳೂರು ಪೂರ್ವ – 9480685706
ಬೆಂಗಳೂರು ಪಶ್ಚಿಮ – 9480685703
ರಾಜಕೀಯ ಪಕ್ಷಗಳು ಪ್ರತಿ ವಾರ್ಡ್ನ ಪ್ರತಿಯೊಂದು ಮತಗಟ್ಟೆಗೆ ಬೂತ್ ಲೆವಲ್ ಏಜೆಂಟ್ (BLA) ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳಿಗೆ ಸಹಕಾರ ನೀಡಲು ಸೂಚಿಸಲಾಗಿದೆ.
ಒಂದು ವೇಳೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರದಿದ್ದಲ್ಲಿ ಪೂರಕ ಪಟ್ಟಿಗಳಲ್ಲಿ ಹೆಸರು ಸೇರಿಸಿಕೊಳ್ಳಲು ಅವಕಾಶವಿದ್ದು, ಎಲ್ಲಾ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಅಪರ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಸಹಾಯಕ ಆಯುಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
