ಜುಲೈ 1ರಿಂದ ಬೆಂಗಳೂರಿನಲ್ಲಿ ಫುಟ್ಪಾತ್ ಅತಿಕ್ರಮಣ ತೆರವು; ಟ್ರಾಫಿಕ್ ಸಿಗ್ನಲ್ಗಳ 75 ಮೀಟರ್ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್ ಕಟ್ಟುನಿಟ್ಟಾಗಿ ಜಾರಿ: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು, ಜೂನ್ 24: ಬೆಂಗಳೂರಿನಲ್ಲಿ ಪಾದಚಾರಿಗಳ ಹಕ್ಕು ಸಂರಕ್ಷಣೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಹತ್ವದ ಕ್ರಮಗಳನ್ನು ಘೋಷಿಸಿದೆ. ಜುಲೈ 1ರಿಂದ ನಗರದಾದ್ಯಂತ ಫುಟ್ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭವಾಗಲಿದ್ದು, ಟ್ರಾಫಿಕ್ ಸಿಗ್ನಲ್ಗಳ ಸುತ್ತ 75 ಮೀಟರ್ ವ್ಯಾಪ್ತಿಯಲ್ಲಿ ‘ನೋ ಪಾರ್ಕಿಂಗ್’ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬಿ-ಸ್ಮೈಲ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಫುಟ್ಪಾತ್ನಲ್ಲಿ ಸುರಕ್ಷಿತವಾಗಿ ನಡೆಯುವ ಹಕ್ಕು ಇದೆ. ಆದ್ದರಿಂದ ಫುಟ್ಪಾತ್ಗಳನ್ನು ಅತಿಕ್ರಮಿಸಿಕೊಂಡಿರುವ ಎಲ್ಲಾ ಅಕ್ರಮಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಜುಲೈ 1ರೊಳಗೆ ಸ್ವಯಂ ತೆರವು; ಬಳಿಕ ಕಾರ್ಯಾಚರಣೆ
ಫುಟ್ಪಾತ್ ಅತಿಕ್ರಮಿಸಿಕೊಂಡಿರುವವರು ಜುಲೈ 1ರೊಳಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಗರಾದ್ಯಂತ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಬೇಕು. “ಕಾನೂನು ನಿಮಗೆ ನೀಡಿರುವ ಅಧಿಕಾರವನ್ನು ಬಳಸಿಕೊಳ್ಳಿ. ಯಾವುದೇ ಸಮಸ್ಯೆ ಎದುರಾದರೆ ಅದರ ಹೊಣೆ ನಾನು ಹೊರುತ್ತೇನೆ,” ಎಂದು ಸಚಿವರು ಅಧಿಕಾರಿಗಳಿಗೆ ಭರವಸೆ ನೀಡಿದರು.
ಟ್ರಾಫಿಕ್ ಸಿಗ್ನಲ್ಗಳ ಬಳಿ 75 ಮೀಟರ್ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್
ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟ್ರಾಫಿಕ್ ಸಿಗ್ನಲ್ಗಳ ಸುತ್ತಮುತ್ತ 75 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಿಯಮ ಉಲ್ಲಂಘಿಸಿ ನಿಲ್ಲಿಸಲಾದ ವಾಹನಗಳನ್ನು ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಾರ್ವಜನಿಕರು ಈ ಕ್ರಮಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಗುಂಡಿ ಮುಚ್ಚುವ ಕಾಮಗಾರಿಗೆ ₹77 ಕೋಟಿ
ಮಳೆಗಾಲದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್ಗಳ ಸಮೀಪದ ಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚಲು ಸೂಚನೆ ನೀಡಲಾಗಿದೆ.
ಇದಕ್ಕಾಗಿ ₹77 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
2,000 ಕಿ.ಮೀ. ರಸ್ತೆಗಳಲ್ಲಿ ಸುಗಮ ಫುಟ್ಪಾತ್
ನಗರದ ಸುಮಾರು 2,000 ಕಿಲೋಮೀಟರ್ ರಸ್ತೆಗಳಲ್ಲಿ ಹಂತ ಹಂತವಾಗಿ ಗುಣಮಟ್ಟದ ಹಾಗೂ ಸುಗಮ ಫುಟ್ಪಾತ್ಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಇದು ಅತ್ಯಗತ್ಯ ಎಂದು ಸಚಿವರು ಹೇಳಿದರು.
ಬೀದಿ ವ್ಯಾಪಾರಿಗಳೊಂದಿಗೆ ಸಭೆ
ಫುಟ್ಪಾತ್ಗಳನ್ನು ಅತಿಕ್ರಮಣ ಮುಕ್ತಗೊಳಿಸುವ ಜೊತೆಗೆ ಬೀದಿ ವ್ಯಾಪಾರಿಗಳ ಜೀವನೋಪಾಯಕ್ಕೂ ತೊಂದರೆಯಾಗದಂತೆ ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೇ ಬೀದಿ ವ್ಯಾಪಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಪಾದಚಾರಿಗಳ ಹಕ್ಕು ರಕ್ಷಣೆ, ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಗಾಗಿ ಕೈಗೊಂಡಿರುವ ಈ ಕ್ರಮಗಳನ್ನು ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.