ಬೆಂಗಳೂರು ಟ್ರಿಪಲ್ ಮರ್ಡರ್: ಎರಡನೇ ಆರೋಪಿ ಕೆನೆತ್ ಪುದುಚೇರಿಯಲ್ಲಿ ಬಂಧನ; ತನಿಖೆ ಪೂರ್ಣಗೊಳ್ಳುವವರೆಗೆ ವದಂತಿ ಹರಡದಂತೆ ಪೊಲೀಸರ ಮನವಿ
ಬೆಂಗಳೂರು, ಜೂ. 26: ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ತ್ರಿವಳಿ ಹತ್ಯೆ ಪ್ರಕರಣದ ಎರಡನೇ ಆರೋಪಿ ಕೆನೆತ್ನನ್ನು ಪುದುಚೇರಿಯಲ್ಲಿ ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವದಂತಿ ಅಥವಾ ಊಹಾಪೋಹಗಳನ್ನು ಹರಡಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ಪ್ರಕರಣದ ತನಿಖೆಯನ್ನು ಪೂರ್ವ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಹಾಗೂ ವೈಟ್ಫೀಲ್ಡ್ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಆರಂಭಿಸಲಾಗಿತ್ತು ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಆರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಬಳಿಕ ಆರೋಪಿಗಳ ಪತ್ತೆಗಾಗಿ ಅವುಗಳ ಸಂಖ್ಯೆಯನ್ನು ಹತ್ತಕ್ಕೆ ಹೆಚ್ಚಿಸಲಾಗಿತ್ತು.
ಪ್ರಕರಣದಲ್ಲಿ ಈಗಾಗಲೇ ಶ್ವೇತಾ ಎಂಬ ಮಹಿಳಾ ಆರೋಪಿಯನ್ನು ಬಂಧಿಸಲಾಗಿತ್ತು. ಹತ್ಯೆ ಬಳಿಕ ಪರಾರಿಯಾಗಿದ್ದ ಕೆನೆತ್ನ್ನು ಪುದುಚೇರಿಯಲ್ಲಿ ಬೆಂಗಳೂರು ಪೊಲೀಸರು ಹಾಗೂ ಪುದುಚೇರಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಮೊಬೈಲ್ ಫೋನ್ ಬಳಸದೇ ಹಾಗೂ ಯಾರೊಂದಿಗೂ ಸಂಪರ್ಕದಲ್ಲಿರದೇ ಇದ್ದ ಕಾರಣ ಕೆನೆತ್ನನ್ನು ಪತ್ತೆಹಚ್ಚುವುದು ಸವಾಲಾಗಿತ್ತು ಎಂದು ಆಯುಕ್ತರು ಹೇಳಿದರು.
“ತಾಂತ್ರಿಕ ಮಾಹಿತಿ, ಗುಪ್ತಚರ ಮಾಹಿತಿ ಹಾಗೂ ವಿವಿಧ ಮೂಲಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ನಮ್ಮ ತಂಡಗಳು ಕಾರ್ಯಾಚರಣೆ ನಡೆಸಿವೆ. ಪುದುಚೇರಿ ಪೊಲೀಸರಿಂದ ಉತ್ತಮ ಸಹಕಾರ ದೊರೆತಿದ್ದು, ಅವರಿಗೆ ಅಧಿಕೃತವಾಗಿ ಅಭಿನಂದನಾ ಪತ್ರ ಕಳುಹಿಸಲಾಗುತ್ತದೆ,” ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ವದಂತಿಗಳಿಗೆ ಆಸ್ಪದ ಕೊಡಬೇಡಿ: ಪೊಲೀಸ್ ಆಯುಕ್ತ
ಪ್ರಕರಣದ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ವಿಚಾರಣೆ ವೇಳೆ ಆರೋಪಿಗಳು ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದರು.
“ಆರೋಪಿಗಳು ನೀಡುವ ಪ್ರತಿಯೊಂದು ಹೇಳಿಕೆಯನ್ನು ನಾವು ಲಭ್ಯವಿರುವ ಭೌತಿಕ ಸಾಕ್ಷ್ಯಗಳು ಹಾಗೂ ಸಾಂದರ್ಭಿಕ ಸಾಕ್ಷ್ಯಗಳೊಂದಿಗೆ ಪರಿಶೀಲಿಸುತ್ತಿದ್ದೇವೆ. ತನಿಖೆ ಪೂರ್ಣಗೊಳ್ಳುವ ಮುನ್ನ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ,” ಎಂದು ಹೇಳಿದರು.
ಈ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಪರಿಶೀಲಿಸದ ಮಾಹಿತಿ ಅಥವಾ ಊಹಾಪೋಹಗಳನ್ನು ಪ್ರಸಾರ ಮಾಡಬಾರದು ಎಂದು ಅವರು ಮನವಿ ಮಾಡಿದರು.
“ಪೊಲೀಸರು ಅಧಿಕೃತವಾಗಿ ಬಿಡುಗಡೆ ಮಾಡುವ ಮಾಹಿತಿಯನ್ನಷ್ಟೇ ಸತ್ಯ ಎಂದು ಪರಿಗಣಿಸಬೇಕು. ಬೇರೆ ಬೇರೆ ರೀತಿಯ ಕಥೆಗಳು ಅಥವಾ ವದಂತಿಗಳನ್ನು ಪ್ರಸಾರ ಮಾಡುವುದು ಕಾನೂನುಬಾಹಿರವಾಗುವ ಸಾಧ್ಯತೆಯಿದ್ದು, ತನಿಖೆಯ ಮೇಲೂ ಪರಿಣಾಮ ಬೀರುತ್ತದೆ,” ಎಂದು ಎಚ್ಚರಿಸಿದರು.
ಹತ್ಯೆಯ ಹಿಂದಿನ ಉದ್ದೇಶ ಹಾಗೂ ಇದು ಪೂರ್ವನಿಯೋಜಿತ ಕೃತ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ತನಿಖೆಯ ಪ್ರಮುಖ ಅಂಶವಾಗಿರುವುದರಿಂದ ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
“ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ಸೂಕ್ತ ಸಮಯದಲ್ಲಿ ಪ್ರಕರಣದ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳುತ್ತೇವೆ,” ಎಂದು ಹೇಳಿದರು.
ಹಲವು ನಗರಗಳಲ್ಲಿ ಸಂಚರಿಸಿದ ಬಳಿಕ ಪುದುಚೇರಿಯಲ್ಲಿ ಸೆರೆ
ಪೊಲೀಸರ ಮಾಹಿತಿ ಪ್ರಕಾರ, ಕೆನೆತ್ ಪೆರುಚಿ, ವೇಲಂಕಣಿ, ಚೆನ್ನೈ ಹಾಗೂ ಕೊಯಮತ್ತೂರು ಸೇರಿದಂತೆ ಹಲವು ನಗರಗಳಲ್ಲಿ ಸಂಚರಿಸಿದ ಬಳಿಕ ಪುದುಚೇರಿಗೆ ತಲುಪಿದ್ದ.
ಆತನ ಪ್ರಯಾಣದ ವಿವರಗಳನ್ನು ವಿಶ್ಲೇಷಿಸಿದ ಬೆಂಗಳೂರು ಪೊಲೀಸರು ಪುದುಚೇರಿ ಪೊಲೀಸರ ನೆರವು ಪಡೆದು ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು.
ಸ್ಥಳೀಯ ಮಾಹಿತಿ ಆಧರಿಸಿ ಪುದುಚೇರಿಯ ಮದ್ಯ ಮಾರಾಟ ಮಳಿಗೆಯೊಂದರಲ್ಲಿ ಕೆನೆತ್ ಇರುವ ಮಾಹಿತಿ ಲಭಿಸಿದ್ದು, ಪೊಲೀಸರು ಬಂಧಿಸಲು ಮುಂದಾದ ವೇಳೆ ಆತ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಪುದುಚೇರಿ ಪೊಲೀಸ್ ಇಲಾಖೆಯ ಸಹಾಯಕ ಉಪನಿರೀಕ್ಷಕ (ಎಎಸ್ಐ) ರಾಮಲಿಂಗಂ ಬೆನ್ನಟ್ಟಿದ ಬಳಿಕ ಕೆನೆತ್ನನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕೆನೆತ್ ಶ್ವೇತಾ ಜೊತೆ ಸಂಬಂಧ ಹೊಂದಿದ್ದು, ಆಕೆಯ ತಂದೆ, ತಾಯಿ ಹಾಗೂ ಸಹೋದರಿಯ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ತನಿಖೆ ನಡೆಯುತ್ತಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ವಿಚಾರಣೆ ಹಾಗೂ ಲಭ್ಯವಾಗುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.