ಅಪಘಾತ ತಡೆಗೆ ಕೃಷಿ ಹೊಂಡಗಳಿಗೆ ತಂತಿಬೇಲಿ ಮತ್ತು ಎಚ್ಚರಿಕೆ ಫಲಕ ಅಳವಡಿಸಲು ಬೆಂಗಳೂರು ನಗರ ರೈತರಿಗೆ ಸೂಚನೆ
ಬೆಂಗಳೂರು: ಕೃಷಿ ಹೊಂಡಗಳ ಸುತ್ತ ತಂತಿಬೇಲಿ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಬೆಂಗಳೂರು ನಗರ ಕೃಷಿ ಇಲಾಖೆ ರೈತರಿಗೆ ಸೂಚಿಸಿದೆ. ಅಗತ್ಯ ಸುರಕ್ಷತಾ ಕ್ರಮಗಳಿಲ್ಲದಿದ್ದರೆ ಮಕ್ಕಳು, ಸಾರ್ವಜನಿಕರು ಮತ್ತು ಜಾನುವಾರುಗಳು ಆಕಸ್ಮಿಕವಾಗಿ ಹೊಂಡಗಳಿಗೆ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
“ಎಚ್ಚರಿಕೆಯ ಒಂದು ಹೆಜ್ಜೆ-ಅಪಘಾತಗಳಿಂದ ನೂರಾರು ಹೆಜ್ಜೆ ದೂರ” ಎಂಬ ಸುರಕ್ಷತಾ ಸಂದೇಶದೊಂದಿಗೆ ಬೆಂಗಳೂರು ನಗರ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರು ರೈತರಿಗೆ ಈ ಮನವಿ ಮಾಡಿದ್ದಾರೆ.
ಕೃಷಿ ಭಾಗ್ಯ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಡಿ ನಿರ್ಮಿಸಲಾಗಿರುವ ಕೃಷಿ ಹೊಂಡಗಳು ಮಳೆನೀರು ಸಂಗ್ರಹಣೆ ಮತ್ತು ಕೃಷಿ ಚಟುವಟಿಕೆಗಳಿಗೆ ಉಪಯುಕ್ತವಾಗಿವೆ. ಆದರೆ ರಕ್ಷಣಾತ್ಮಕ ಬೇಲಿ ಇಲ್ಲದ ಹೊಂಡಗಳು ಜನರು ಮತ್ತು ಪ್ರಾಣಿಗಳಿಗೆ ಅಪಾಯ ಉಂಟುಮಾಡಬಹುದು ಎಂದು ಇಲಾಖೆ ತಿಳಿಸಿದೆ.
ಕೃಷಿ ಹೊಂಡ ಹೊಂದಿರುವ ಎಲ್ಲ ರೈತರು ಹೊಂಡದ ಸುತ್ತ ತಂತಿಬೇಲಿ ಅಳವಡಿಸುವುದರ ಜೊತೆಗೆ, ಸಾರ್ವಜನಿಕರಿಗೆ ಅಪಾಯದ ಬಗ್ಗೆ ಮಾಹಿತಿ ನೀಡಲು “ಅಪಾಯ-ಕೃಷಿ ಹೊಂಡ” ಎಂಬ ಎಚ್ಚರಿಕೆ ಫಲಕವನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು ಎಂದು ಸೂಚಿಸಲಾಗಿದೆ.
ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯ ಸುರಕ್ಷತಾ ಕ್ರಮಗಳಾಗಿ ಪರಿಗಣಿಸಿ, ತಮ್ಮ ಜಮೀನಿನಲ್ಲಿರುವ ಕೃಷಿ ಹೊಂಡಗಳನ್ನು ತಕ್ಷಣ ಸುರಕ್ಷಿತಗೊಳಿಸುವಂತೆ ಇಲಾಖೆ ರೈತರಿಗೆ ಮನವಿ ಮಾಡಿದೆ.
