ಬೆಂಗಳೂರು: ರಾಜ್ಯದಲ್ಲಿನ ಆಹಾರ ಉದ್ಯಮಗಳು ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಎಲ್ಲ ಲೋಪಗಳನ್ನು 15 ದಿನಗಳೊಳಗೆ ಸರಿಪಡಿಸಬೇಕು ಎಂದು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ನಿರ್ದೇಶಿಸಿದೆ. ಗಡುವಿನ ನಂತರ ಮರುತಪಾಸಣೆ ನಡೆಸಲಾಗುವುದು ಹಾಗೂ ಉಲ್ಲಂಘನೆಗಳು ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಕರ್ನಾಟಕದಾದ್ಯಂತ ಇತ್ತೀಚೆಗೆ ನಡೆಸಲಾದ ವಿಶೇಷ ತಪಾಸಣಾ ಅಭಿಯಾನದಲ್ಲಿ ವಿವಿಧ ಆಹಾರ ಉದ್ಯಮಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಮತ್ತು ನೈರ್ಮಲ್ಯ ನಿಯಮಗಳ ಪಾಲನೆಯಾಗದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರ ಕಚೇರಿ ಈ ಸಲಹಾ ಸೂಚನೆ ಹೊರಡಿಸಿದೆ.
ಎಲ್ಲ ಆಹಾರ ಉದ್ಯಮಗಳು ಮಾನ್ಯ FSSAI ಪರವಾನಗಿ ಅಥವಾ ನೋಂದಣಿ ಹೊಂದಿರಬೇಕು. ಮಾನವ ಸೇವನೆಗೆ ಯೋಗ್ಯವಾದ ಸುರಕ್ಷಿತ ಮತ್ತು ಗುಣಮಟ್ಟದ ಆಹಾರವನ್ನು ಮಾತ್ರ ಸಿದ್ಧಪಡಿಸಿ, ಸಂಗ್ರಹಿಸಿ ಮತ್ತು ಮಾರಾಟ ಮಾಡಬೇಕು. ಅವಧಿ ಮೀರಿದ, ಹಾಳಾದ, ಕೊಳೆತ, ಕಲುಷಿತಗೊಂಡ ಅಥವಾ ಗುಣಮಟ್ಟದ ಬಗ್ಗೆ ಅನುಮಾನವಿರುವ ಆಹಾರ ಪದಾರ್ಥಗಳನ್ನು ಬಳಸಬಾರದು. ಅಂತಹ ಪದಾರ್ಥಗಳನ್ನು ತಕ್ಷಣ ಪ್ರತ್ಯೇಕಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು.
ಕಚ್ಚಾ ವಸ್ತುಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ, ಗುಣಮಟ್ಟ, ಬ್ಯಾಚ್ ಸಂಖ್ಯೆ, ತಯಾರಿಸಿದ ದಿನಾಂಕ ಮತ್ತು ಬಳಕೆಯ ಅಂತಿಮ ದಿನಾಂಕವನ್ನು ಪರಿಶೀಲಿಸಬೇಕು. ಆಹಾರ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಸ್ವಚ್ಛ ಹಾಗೂ ಸುರಕ್ಷಿತ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.
ಅಡುಗೆಮನೆ, ಆಹಾರ ತಯಾರಿಕಾ ಮತ್ತು ದಾಸ್ತಾನು ಪ್ರದೇಶಗಳು ಹಾಗೂ ಆಹಾರದ ಸಂಪರ್ಕಕ್ಕೆ ಬರುವ ಪಾತ್ರೆಗಳು ಮತ್ತು ಉಪಕರಣಗಳನ್ನು ಸ್ವಚ್ಛವಾಗಿಟ್ಟು ಅಗತ್ಯವಿದ್ದಲ್ಲಿ ಸೋಂಕುರಹಿತಗೊಳಿಸಬೇಕು. ಹಾನಿಗೊಂಡ ಮೂಲಸೌಕರ್ಯವನ್ನು ತಕ್ಷಣ ದುರಸ್ತಿಪಡಿಸಬೇಕು. ಕೀಟಗಳು, ಇಲಿಗಳು ಮತ್ತು ಜಿರಳೆಗಳ ಪ್ರವೇಶ ತಡೆಯಲು ಪರಿಣಾಮಕಾರಿ ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು.
ಹಾಲು, ಮಾಂಸ, ಮೊಟ್ಟೆ, ಸಿದ್ಧ ಆಹಾರ ಮತ್ತು ಬೇಗ ಹಾಳಾಗುವ ಪದಾರ್ಥಗಳನ್ನು ನಿಗದಿತ ತಾಪಮಾನದಲ್ಲಿ ಇಡಬೇಕು. ರೆಫ್ರಿಜರೇಟರ್, ಡೀಪ್ ಫ್ರೀಜರ್ ಮತ್ತು ಇತರ ತಾಪಮಾನ ನಿಯಂತ್ರಣ ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಆಹಾರ ನಿರ್ವಹಿಸುವ ಸಿಬ್ಬಂದಿ ಸ್ವಚ್ಛ ಬಟ್ಟೆ, ತಲೆಯ ಹೊದಿಕೆ, ಏಪ್ರನ್ ಮತ್ತು ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಬೇಕು. ಅವರಿಗೆ ಆಹಾರ ಸುರಕ್ಷತೆ ಮತ್ತು ವೈಯಕ್ತಿಕ ನೈರ್ಮಲ್ಯದ ಕುರಿತು ತರಬೇತಿ ನೀಡಿ, ನಿಯಮಾನುಸಾರ ಆರೋಗ್ಯ ತಪಾಸಣೆ ನಡೆಸಬೇಕು.
ಆಹಾರ ತಯಾರಿಕೆ ಮತ್ತು ಕುಡಿಯಲು ಬಳಸುವ ನೀರು ಹಾಗೂ ಮಂಜುಗಡ್ಡೆ ನಿಗದಿತ ಗುಣಮಟ್ಟ ಹೊಂದಿರಬೇಕು. ಪ್ಯಾಕೇಜ್ ಮಾಡಿದ ಆಹಾರದಲ್ಲಿ ಕಡ್ಡಾಯ ಲೇಬಲ್ ಮಾಹಿತಿ ಇರಬೇಕು ಮತ್ತು ಗ್ರಾಹಕರನ್ನು ತಪ್ಪುದಾರಿಗೆ ಎಳೆಯುವ ಹೇಳಿಕೆಗಳನ್ನು ಬಳಸಬಾರದು. ಆಹಾರ ತ್ಯಾಜ್ಯವನ್ನು ಮುಚ್ಚಳವಿರುವ ಪಾತ್ರೆಗಳಲ್ಲಿ ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡಬೇಕು.
ಖರೀದಿ, ಸಂಗ್ರಹಣೆ, ತಾಪಮಾನ ನಿಯಂತ್ರಣ, ಸ್ವಚ್ಛತೆ, ಕೀಟ ನಿಯಂತ್ರಣ ಮತ್ತು ಸಿಬ್ಬಂದಿ ತರಬೇತಿಗೆ ಸಂಬಂಧಿಸಿದ ದಾಖಲೆಗಳನ್ನು ನಿರ್ವಹಿಸಬೇಕು. ತಪಾಸಣೆಯ ವೇಳೆ ಅಧಿಕೃತ ಅಧಿಕಾರಿಗಳಿಗೆ ದಾಖಲೆ ಮತ್ತು ಮಾಹಿತಿ ನೀಡಿ ಸಂಪೂರ್ಣ ಸಹಕಾರ ಒದಗಿಸಬೇಕು.
ಆಗಸ್ಟ್ 20ರಂದು ಸಲಹಾ ಸೂಚನೆ ಹೊರಡಿಸಿದ ದಿನದಿಂದ 15 ದಿನಗಳೊಳಗೆ ಎಲ್ಲ ಕೊರತೆಗಳನ್ನು ಕಡ್ಡಾಯವಾಗಿ ಸರಿಪಡಿಸಬೇಕು. ಗಡುವಿನ ನಂತರ ಆಹಾರ ಸುರಕ್ಷತಾ ಅಧಿಕಾರಿಗಳು ಮರುತಪಾಸಣೆ ನಡೆಸಲಿದ್ದಾರೆ. ಲೋಪಗಳು ಸರಿಯಾಗದಿದ್ದರೆ ಅಥವಾ ಉಲ್ಲಂಘನೆ ಮುಂದುವರಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಅದರಡಿ ರೂಪಿಸಲಾದ ನಿಯಮಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
