ಬೆಂಗಳೂರು ಜಲಮಂಡಳಿಯ ‘ಬ್ಲೂ ಫೋರ್ಸ್’ ಭರ್ಜರಿ ಕಾರ್ಯಾಚರಣೆ; 11,217 ಅಕ್ರಮ ಸಂಪರ್ಕ ಕಡಿತ, 55 ಕೋಟಿ ರೂ. ಆದಾಯ ಸಂಗ್ರಹ
ಬೆಂಗಳೂರು, ಮೇ 8: ಅಕ್ರಮ ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ, ಕುಡಿಯುವ ನೀರಿನ ದುರ್ಬಳಕೆ ಹಾಗೂ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಬೆಂಗಳೂರು ಜಲಮಂಡಳಿ (BWSSB) ತನ್ನ ವಿಶೇಷ ಕಾರ್ಯಾಚರಣೆ ಪಡೆಯಾದ ‘ಬ್ಲೂ ಫೋರ್ಸ್’ ಮೂಲಕ ನಗರಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಕಳೆದ ಐದು ತಿಂಗಳಲ್ಲಿ ನಗರದಲ್ಲಿ ಒಟ್ಟು 54,625 ಕಟ್ಟಡಗಳನ್ನು ತಪಾಸಣೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 11,217 ಅಕ್ರಮ ನೀರು ಹಾಗೂ ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಈ ಕಾರ್ಯಾಚರಣೆಯಿಂದ ಜಲಮಂಡಳಿಗೆ ಒಟ್ಟಾರೆ 55 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಹರಿದುಬಂದಿದೆ.
ಜಲಮಂಡಳಿ ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯಿಂದ ಸುಮಾರು 1,000 ಮಿಲಿಯನ್ ಲೀಟರ್ ಕುಡಿಯುವ ನೀರು ಉಳಿತಾಯವಾಗಿದ್ದು, ಇದುವರೆಗೆ ಅಕ್ರಮವಾಗಿ ಬಳಕೆಯಾಗುತ್ತಿದ್ದ ನೀರನ್ನು ಅಧಿಕೃತ ಬಿಲ್ಲಿಂಗ್ ವ್ಯಾಪ್ತಿಗೆ ತರಲಾಗಿದೆ.
ಕಾರ್ಯಾಚರಣೆಯ ಪ್ರಮುಖ ಅಂಶಗಳು
ನಗರದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಜಲಮಂಡಳಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ:
- 54,625 ಕಟ್ಟಡಗಳ ತಪಾಸಣೆ
- 11,217 ಸಂಪರ್ಕಗಳ ಕಡಿತ
- 9,751 ಅಕ್ರಮ ಕುಡಿಯುವ ನೀರಿನ ಸಂಪರ್ಕ ಕಡಿತ
- 1,466 ಅಕ್ರಮ ಒಳಚರಂಡಿ ಸಂಪರ್ಕ ಕಡಿತ
ಅಕ್ರಮ ಸಂಪರ್ಕಗಳ ವಿರುದ್ಧ ಕೈಗೊಂಡ ಕ್ರಮಗಳಲ್ಲಿ ಪೂರ್ವ ವಲಯದಲ್ಲಿ ಗರಿಷ್ಠ 3,151 ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
ಇನ್ನೊಂದೆಡೆ ದಕ್ಷಿಣ ವಲಯದಲ್ಲಿ ಗರಿಷ್ಠ 13,908 ಕಟ್ಟಡಗಳನ್ನು ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರೋರಾಟಾ ಶುಲ್ಕದಿಂದ 50 ಕೋಟಿ ರೂ. ಸಂಗ್ರಹ
ಜಲಮಂಡಳಿ ತಿಳಿಸಿರುವಂತೆ, ಅಕ್ರಮ ಸಂಪರ್ಕಗಳ ವಿರುದ್ಧದ ಕಟ್ಟುನಿಟ್ಟಿನ ಕ್ರಮದಿಂದಾಗಿ ಆದಾಯ ಸೋರಿಕೆಗೆ ದೊಡ್ಡ ಮಟ್ಟದಲ್ಲಿ ತಡೆ ಬಿದ್ದಿದೆ.
ಅಕ್ರಮ ಸಂಪರ್ಕ ಹೊಂದಿದ್ದ ಹಲವರು ಬಳಿಕ ತಮ್ಮ ಸಂಪರ್ಕಗಳನ್ನು ಸಕ್ರಮಗೊಳಿಸಲು ಮುಂದಾಗಿದ್ದು, ಇದರ ಪರಿಣಾಮವಾಗಿ ಪ್ರೋರಾಟಾ ಶುಲ್ಕದ ರೂಪದಲ್ಲಿ ಸುಮಾರು 50 ಕೋಟಿ ರೂ. ಸಂಗ್ರಹವಾಗಿದೆ.
1,000 ಮಿಲಿಯನ್ ಲೀಟರ್ ನೀರು ಈಗ ಅಧಿಕೃತ ಬಿಲ್ಲಿಂಗ್ ವ್ಯಾಪ್ತಿಗೆ
ಜಲಮಂಡಳಿಯ ಪ್ರಕಾರ, ಈ ಕಾರ್ಯಾಚರಣೆಯಿಂದ ಪ್ರತಿ ತಿಂಗಳು ಸುಮಾರು 210 ಮಿಲಿಯನ್ ಲೀಟರ್ ಶುದ್ಧ ಕುಡಿಯುವ ನೀರು ಉಳಿತಾಯವಾಗುತ್ತಿದೆ.
ಇದುವರೆಗೆ ಅಕ್ರಮವಾಗಿ ಬಳಕೆಯಾಗುತ್ತಿದ್ದ ಸುಮಾರು 1,000 ಮಿಲಿಯನ್ ಲೀಟರ್ ನೀರನ್ನು ಇದೀಗ ಅಧಿಕೃತ ಬಿಲ್ಲಿಂಗ್ ವ್ಯವಸ್ಥೆಗೆ ಸೇರಿಸಲಾಗಿದೆ.
ಇದರಿಂದ ಜಲಮಂಡಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ಸುಮಾರು 5 ಕೋಟಿ ರೂ. ಆದಾಯ ಲಭಿಸುತ್ತಿದೆ.
ಜಲಮಂಡಳಿ ಅಧ್ಯಕ್ಷರ ಹೇಳಿಕೆ
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ನಗರದ ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ನೀರು ಮತ್ತು ಉತ್ತಮ ಒಳಚರಂಡಿ ವ್ಯವಸ್ಥೆ ಒದಗಿಸುವುದು ಮಂಡಳಿಯ ಪ್ರಮುಖ ಆದ್ಯತೆಯಾಗಿದೆ ಎಂದರು.
ಅಕ್ರಮ ನೀರಿನ ಬಳಕೆ ಹಾಗೂ ಅನಧಿಕೃತ ಒಳಚರಂಡಿ ಸಂಪರ್ಕಗಳು ಜಲಮಂಡಳಿಯ ಮೂಲಸೌಕರ್ಯಗಳ ಮೇಲೆ ಭಾರೀ ಒತ್ತಡ ಉಂಟುಮಾಡುತ್ತವೆ ಎಂದು ಅವರು ಎಚ್ಚರಿಸಿದರು.
ಬ್ಲೂ ಫೋರ್ಸ್ ತಂಡಗಳು ಮುಂದುವರಿದೂ ಯಾವುದೇ ಮುಲಾಜಿಲ್ಲದೆ ಅಕ್ರಮ ಸಂಪರ್ಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.
‘ಬ್ಲೂ ಫೋರ್ಸ್’ ಬಗ್ಗೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2025ರ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಈ ವಿಶೇಷ ‘ಬ್ಲೂ ಫೋರ್ಸ್’ ಪಡೆಯನ್ನು ಉದ್ಘಾಟಿಸಿದ್ದರು.
ಪ್ರಸ್ತುತ ನಗರದಲ್ಲಿ ಕಾರ್ಯಾಚರಣೆಗಾಗಿ ಒಟ್ಟು 18 ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
ಪ್ರತಿ ತಂಡದಲ್ಲಿ: ಒಬ್ಬ ಮಾಜಿ ಸೈನಿಕ, ಒಬ್ಬ ಮೇಲ್ವಿಚಾರಕ, ಇಬ್ಬರು ಸಂಪರ್ಕ ಕಡಿತ ಸಿಬ್ಬಂದಿ.
ಕಾರ್ಯನಿರ್ವಹಿಸುತ್ತಿದ್ದು, ನಗರದಾದ್ಯಂತ ಶಿಸ್ತಿನ ಮತ್ತು ಪರಿಣಾಮಕಾರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
