11 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ; ಪ್ರತಿ ಕ್ವಿಂಟಾಲ್ಗೆ ₹7,721 ನಿಗದಿ
ಬೆಂಗಳೂರು: 2025-26ನೇ ಸಾಲಿನ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಬೆಳೆ ಖರೀದಿಯನ್ನು ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ಗೆ ₹7,721 ದರದಲ್ಲಿ ಖರೀದಿಸಲು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳ ಅನ್ವಯ ರಾಜ್ಯದ 11 ಜಿಲ್ಲೆಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ಸೂಚನೆ ನೀಡಲಾಗಿದೆ.
ಖರೀದಿ ನಡೆಯಲಿರುವ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ, ರಾಯಚೂರು, ಧಾರವಾಡ,
ಖರೀದಿ ಸಂಸ್ಥೆಗಳ ನೇಮಕ
ಕೇಂದ್ರ ಸರ್ಕಾರವು ನಾಫೆಡ್ (NAFED) ಮತ್ತು ಎನ್ಸಿಸಿಎಫ್ (NCCF) ಸಂಸ್ಥೆಗಳನ್ನು ಖರೀದಿ ಸಂಸ್ಥೆಗಳಾಗಿ ನೇಮಕ ಮಾಡಿದ್ದು, ರಾಜ್ಯ ಸರ್ಕಾರವು ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳವನ್ನು ರಾಜ್ಯ ಮಟ್ಟದ ಖರೀದಿ ಸಂಸ್ಥೆಯಾಗಿ ನೇಮಕ ಮಾಡಿದೆ.
ನೋಂದಣಿ ಮತ್ತು ಖರೀದಿ ಅವಧಿ
ಸರ್ಕಾರವು:
- ರೈತರ ನೋಂದಣಿಗೆ 50 ದಿನಗಳ ಅವಧಿ
- ಖರೀದಿ ಪ್ರಕ್ರಿಯೆಗೆ 60 ದಿನಗಳ ಅವಧಿ ನಿಗದಿಪಡಿಸಿದೆ.
ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಗಳ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ನೋಂದಣಿ ಪ್ರಕ್ರಿಯೆಯ ಜೊತೆಯಲ್ಲೇ ಖರೀದಿ ಪ್ರಕ್ರಿಯೆಯನ್ನೂ ಆರಂಭಿಸಲು ಸೂಚನೆ ನೀಡಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಖರೀದಿ ಕೇಂದ್ರ
ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯ ಹೊಂದಿರುವ ಗೋದಾಮುಗಳಿರುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ತೊಂದರೆ ಉಂಟಾಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ದುರ್ಬಳಕೆಗೆ ಎಚ್ಚರಿಕೆ
ರೈತರ ಹೆಸರಿನಲ್ಲಿ ವರ್ತಕರು ಅಥವಾ ಖರೀದಿ ಸಂಸ್ಥೆಗಳು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿರುವ ಸಚಿವರು, ಖರೀದಿ ಪ್ರಗತಿಯ ಮಾಹಿತಿಯನ್ನು ಪ್ರತಿದಿನ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಕ್ರಮದಿಂದ ರಾಜ್ಯದ ಪ್ರಮುಖ ಎಣ್ಣೆ ಬೀಜ ಬೆಳೆಗಾರ ರೈತರಿಗೆ ಮಾರುಕಟ್ಟೆ ಭದ್ರತೆ ಮತ್ತು ಸಮರ್ಪಕ ಬೆಲೆ ಲಭಿಸುವ ನಿರೀಕ್ಷೆಯಿದೆ.
