ಶನಿವಾರ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರ ಪರಿಶೀಲನೆ ವೇಳೆ ಕೆರೆಯ ಬಳಿ ಅಧಿಕಾರಿಗಳು. ಚಿತ್ರ: ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ಬೆಂಗಳೂರು: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ಐಎಎಸ್ ಅವರು ಶನಿವಾರ ಬೆಳಿಗ್ಗೆ ಪಾಲಿಕೆಯ ಗಡಿಭಾಗಗಳಲ್ಲಿ ಪೌರ ಕಾಮಗಾರಿಗಳು, ಘನತ್ಯಾಜ್ಯ ನಿರ್ವಹಣೆ, ಕೆರೆಗಳು, ಜಂಕ್ಷನ್ ಅಭಿವೃದ್ಧಿ ಹಾಗೂ ವಾರ್ಡ್ ಒನ್ ಅಭಿಯಾನದ ಕುರಿತು ವಿಭಾಗವಾರು ಪರಿಶೀಲನೆ ನಡೆಸಿದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ವಲಯ-1ರ ಕೆಂಗೇರಿ ಮತ್ತು ರಾಜರಾಜೇಶ್ವರಿನಗರ ವಿಭಾಗಗಳು ಹಾಗೂ ವಲಯ-2ರ ಗೋವಿಂದರಾಜನಗರ, ಯಡಿಯೂರು ಮತ್ತು ಬಸವನಗುಡಿ ವಿಭಾಗಗಳಲ್ಲಿ ಅವರು ಪರಿಶೀಲನೆ ನಡೆಸಿದರು.
ಘನತ್ಯಾಜ್ಯ ನಿರ್ವಹಣೆ ಕುರಿತು ಮಾತನಾಡಿದ ಅವರು, ಕಸದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಪಾದಚಾರಿ ಮಾರ್ಗ ದುರಸ್ತಿ ಮತ್ತು ಬೀದಿ ದೀಪ ವ್ಯವಸ್ಥೆ ಸೇರಿದಂತೆ ಎಲ್ಲಾ ಪೌರ ಮೂಲಸೌಕರ್ಯಗಳನ್ನು ಸರಿಪಡಿಸಲು ಎಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.
ಕೆಂಗೇರಿ ವಿಭಾಗದಲ್ಲಿ ಹೇರೋಹಳ್ಳಿ ಕ್ರಾಸ್ ಬಳಿಯ ಕಸವನ್ನು ವ್ಯವಸ್ಥಿತವಾಗಿ ತೆರವುಗೊಳಿಸಿ ಅದು ಬ್ಲ್ಯಾಕ್ ಸ್ಪಾಟ್ ಆಗದಂತೆ ನೋಡಿಕೊಳ್ಳಲು ಎಜಿಎಂಗೆ ಸೂಚಿಸಿದರು. ಹೇರೋಹಳ್ಳಿ ಕೆರೆಯ ಹೂಳನ್ನು ತೆರವುಗೊಳಿಸಲು ಕಾರ್ಯಪಾಲಕ ಅಭಿಯಂತರರಿಗೆ (ಕೆರೆಗಳು) ನಿರ್ದೇಶನ ನೀಡಿದ ಅವರು, ಹಲಗೆವಡೇರಹಳ್ಳಿ ಕೆರೆಯನ್ನು ಪರಿಶೀಲಿಸಿ ಒತ್ತುವರಿ ಇದ್ದರೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗೋವಿಂದರಾಜನಗರ ವಿಭಾಗದಲ್ಲಿ ಸುರಕ್ಷಾ 75 ಜಂಕ್ಷನ್ ಅಭಿವೃದ್ಧಿ ಉಪಕ್ರಮದ ಭಾಗವಾಗಿ ಪೊಲೀಸ್ ಮತ್ತು ಬಿಎಂಆರ್‌ಸಿಎಲ್‌ನಿಂದ ಅನುಮತಿ ಪಡೆದು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಕಾಮಗಾರಿ ಆರಂಭಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಸವನಗುಡಿ ವಿಭಾಗದಲ್ಲಿ ಕೆಂಪಾಂಬುಧಿ ಕೆರೆಯನ್ನು ಪರಿಶೀಲಿಸಿದ ಅವರು, ಕೆರೆ ಮತ್ತು ಉದ್ಯಾನಗಳನ್ನು ಲೋಪವಿಲ್ಲದೆ ಸರಿಯಾಗಿ ನಿರ್ವಹಿಸುವುದನ್ನು ಮುಂದುವರಿಸುವಂತೆ ಸೂಚಿಸಿದರು. ಮುಖ್ಯ ಅಭಿಯಂತರರಾದ ಸ್ವಯಂಪ್ರಭಾ ಮತ್ತು ಜಯಶಂಕರ್ ಬಿ.ಎಸ್., ಅಧೀಕ್ಷಕ ಅಭಿಯಂತರ ನಾಗರಾಜ ಸಿಂಗ್ರಿ, ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸವನಗುಡಿ ವಿಭಾಗದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಆಯುಕ್ತರು, ಕೆಂಪಾಂಬುಧಿ ಕೆರೆಯಲ್ಲಿ ನಡೆಯಲಿರುವ ಕಡಲೆಕಾಯಿ ಪರಿಷೆ ಮತ್ತು ತೆಪ್ಪೋತ್ಸವವನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಸರಿಯಾಗಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ಪ್ರಕಟಣೆ ತಿಳಿಸಿದೆ.
