ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ 1,100 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿ, ರಸ್ತೆ ಸುರಕ್ಷತೆ ಮತ್ತು ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಗೆ ಒತ್ತು
ಬೆಂಗಳೂರು, ಜೂನ್ 13: ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿ, ರಸ್ತೆ ಸುರಕ್ಷತೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ವೇಗ ನೀಡುವ ಉದ್ದೇಶದಿಂದ ಶುಕ್ರವಾರ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳಿಗಾಗಿ ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು, ನಗರದ ರಸ್ತೆ ಮತ್ತು ಪಾದಚಾರಿ ಮೂಲಸೌಕರ್ಯವನ್ನು ಉತ್ತಮಗೊಳಿಸಲು ಅಧಿಕಾರಿಗಳಿಗೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು. ಪ್ರತಿ ವಾರ್ಡ್ನಲ್ಲಿ 10 ಕಿಲೋಮೀಟರ್ ಪಾದಚಾರಿ ಮಾರ್ಗ ಅಭಿವೃದ್ಧಿ ಮಾಡುವ ಗುರಿಯನ್ನು ಹೊಂದಲಾಗಿದ್ದು, ವಾರಕ್ಕೆ ಸುಮಾರು 2.5 ಕಿಲೋಮೀಟರ್ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ಇದರ ಮೂಲಕ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಸುಮಾರು 1,100 ಕಿಲೋಮೀಟರ್ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸಾಧಿಸುವ ಗುರಿ ಹೊಂದಲಾಗಿದೆ.
ರಸ್ತೆ ಕರ್ಬ್ಗಳು, ಪಾದಚಾರಿ ಮಾರ್ಗಗಳು ಹಾಗೂ ಚರಂಡಿ ವ್ಯವಸ್ಥೆಗಳ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕು ಎಂದು ಅವರು ತಿಳಿಸಿದರು. ರಸ್ತೆ ಬದಿಯ ಹೂಳು ತೆರವು ಕಾರ್ಯವನ್ನು ತ್ವರಿತಗೊಳಿಸುವ ಜೊತೆಗೆ ಅಂಡರ್ಪಾಸ್ಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಮತ್ತು ಸುಂದರೀಕರಣ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು. ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿಯನ್ನು ಮುಖ್ಯ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದರು.
ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ನಗರಾಭಿವೃದ್ಧಿಯಲ್ಲಿ ಇಂಜಿನಿಯರಿಂಗ್ ವಿಭಾಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಉತ್ತಮ ರಸ್ತೆ, ಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಶೋಲ್ಡರ್ ಡ್ರೇನ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಪಾದಚಾರಿಗಳ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ನಾಗರಿಕರ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಿ ಪರಿಹರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಸಭೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಉಪಕ್ರಮವಾದ ‘ಸುರಕ್ಷ 75’ ಕುರಿತು ವಿಸ್ತೃತ ಚರ್ಚೆ ನಡೆಯಿತು. ನಗರದ ರಸ್ತೆ ಸುರಕ್ಷತೆ ಹೆಚ್ಚಿಸುವುದು, ಅಪಘಾತಪ್ರವಣ ಜಂಕ್ಷನ್ಗಳ ಮರುವಿನ್ಯಾಸ ಮತ್ತು ಸುರಕ್ಷಿತ ಸಾರ್ವಜನಿಕ ಸ್ಥಳಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ಪರಿಶೀಲಿಸಲಾಯಿತು.
ಸಭೆಯಲ್ಲಿ ಹಲವು ಪ್ರಮುಖ ಸೂಚನೆಗಳನ್ನು ನೀಡಲಾಯಿತು. ಪ್ರತಿಯೊಬ್ಬ ಸಹಾಯಕ ಕಾರ್ಯಪಾಲಕ ಅಭಿಯಂತರರು (AEE) ಒಂದೊಂದು ಮಾದರಿ ವಾರ್ಡ್ ರೂಪಿಸಲು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಯಿತು. ನಗರದ ವಿವಿಧ ಭಾಗಗಳಲ್ಲಿ ಗುರುತಿಸಲಾದ ಸುಮಾರು 200 ಬ್ಲ್ಯಾಕ್ ಸ್ಪಾಟ್ಗಳನ್ನು ಸ್ವಚ್ಛಗೊಳಿಸಿ ಸುಂದರೀಕರಿಸುವಂತೆ ಆದೇಶಿಸಲಾಯಿತು.
ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳ ಸ್ಥಾಪನೆ, ಕಸ ಸಂಗ್ರಹಣೆಗೆ ‘ಕಸ ಕಿಯೋಸ್ಕ್’ಗಳ ಸ್ಥಾಪನೆ ಹಾಗೂ ಮೂಲದಲ್ಲಿಯೇ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ಕುರಿತು ಜನಜಾಗೃತಿ ಮೂಡಿಸುವಂತೆ ಸೂಚಿಸಲಾಯಿತು. ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸುವ ಬಲ್ಕ್ ವೇಸ್ಟ್ ಜನರೇಟರ್ಗಳ ವಿರುದ್ಧ ಆರೋಗ್ಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದರು.
ವ್ಯಾಪಾರ ಪರವಾನಗಿ ನಿಯಮ ಪಾಲನೆ ಕುರಿತಂತೆ ಆರೋಗ್ಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಮುಂದಿನ ಒಂದು ತಿಂಗಳ ಅವಧಿಯಲ್ಲಿ 10 ಕಿಲೋಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಕಿರಿಯ ಅಭಿಯಂತರರಿಗೆ ನಿರ್ದಿಷ್ಟ ರಸ್ತೆಗಳನ್ನು ಜವಾಬ್ದಾರಿಯಾಗಿ ಹಂಚಿಕೆ ಮಾಡಿ, ಅವುಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹೊರಗುತ್ತಿಗೆ ಅಭಿಯಂತರರು ಸಹ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಸ್ಕೈವಾಕ್ಗಳು, ಬಸ್ ನಿಲ್ದಾಣಗಳು, ಅಂಡರ್ಪಾಸ್ಗಳು, ಫ್ಲೈಓವರ್ಗಳು ಮತ್ತು ಪಾದಚಾರಿ ಸಬ್ವೇಗಳ ನಿಯಮಿತ ಪರಿಶೀಲನೆ ನಡೆಸಿ ನ್ಯೂನತೆಗಳನ್ನು ಸರಿಪಡಿಸುವಂತೆ ಸೂಚಿಸಲಾಯಿತು. ಮಳೆನೀರುಗಾಲುವೆಗಳ ನಿರ್ವಹಣೆ, ಹೂಳೆತ್ತುವಿಕೆ ಹಾಗೂ ರಸ್ತೆಗುಂಡಿಗಳ ಮುಚ್ಚುವಿಕೆ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ವಾಕಲೂರು ಎನ್ಜಿಒ ಸಂಸ್ಥಾಪಕ ಅರುಣ್ ಪೈ ಅವರು ತಾಂತ್ರಿಕ ಕಾರ್ಯಾಗಾರ ನಡೆಸಿ, ಪಾದಚಾರಿ ಮಾರ್ಗ ಅಭಿವೃದ್ಧಿ, ರಸ್ತೆ ಮೂಲಸೌಕರ್ಯ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಸುಮಾರು 1,100 ಕಿಲೋಮೀಟರ್ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದ ಕಾರ್ಯತಂತ್ರಗಳು ಮತ್ತು ಉತ್ತಮ ಅನುಷ್ಠಾನ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಸಭೆಯಲ್ಲಿ ಅಪರ ಆಯುಕ್ತೆ (ಅಭಿವೃದ್ಧಿ) ಕವಿತಾ ರಾಜಾರಾಂ, ಮುಖ್ಯ ಅಭಿಯಂತರರಾದ ಬಸವರಾಜ ಕಬಾಡೆ ಮತ್ತು ಸ್ವಯಂಪ್ರಭಾ, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಉಪ ಪ್ರಧಾನ ವ್ಯವಸ್ಥಾಪಕರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸಹಾಯಕ, ಕಿರಿಯ ಹಾಗೂ ಹೊರಗುತ್ತಿಗೆ ಅಭಿಯಂತರರು, ವಲಯ ಮಾರ್ಷಲ್ಗಳು ಮತ್ತು ವಿಭಾಗೀಯ ಮಾರ್ಷಲ್ಗಳು ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ನಗರದಲ್ಲಿ ಸುರಕ್ಷಿತ ರಸ್ತೆ ವ್ಯವಸ್ಥೆ, ಸುಗಮ ಪಾದಚಾರಿ ಸಂಚಾರ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಹಾಗೂ ಉತ್ತಮ ನಾಗರಿಕ ಮೂಲಸೌಕರ್ಯ ನಿರ್ಮಾಣಕ್ಕೆ ಈ ಉಪಕ್ರಮಗಳು ಮಹತ್ವದ ಹೆಜ್ಜೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
