ಬೆಂಗಳೂರು: ಮನೆಯೂಟ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಗೆ ಬಿಗ್ ಶಾಕ್ ಎದುರಾಗಿದೆ. ಮನೆಯೂಟ ನೀಡುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಹೈಕೋರ್ಟ್ ಸೂಚಿಸಿತ್ತು. ಆದರೆ, ಕೊಲೆ ಆರೋಪಿಗೆ ಕಾನೂನಿನಲ್ಲಿ ಮನೆಯೂಟಕ್ಕೆ ಅವಕಾಶ ಇಲ್ಲವೆಂದು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆ.
ಆಗಸ್ಟ್ 20ಕ್ಕೆ ದರ್ಶನ್ ಮನೆಯೂಟ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಲಿದ್ದು, ಈ ನಡುವೆ ಅರ್ಜಿ ಬಗ್ಗೆ ಜೈಲಾಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ನೀಡಲು ಜೈಲಾಧಿಕಾರಿಗಳು ವರದಿ ಸಿದ್ಧಪಡಿಸಿದ್ದಾರೆ.
ಅನೇಕ ವಿಐಪಿ ವಿಚಾರಣಾಧೀನ ಬಂಧಿಗಳಿಗೆ ಮನೆಯೂಟ ನಿರಾಕರಣೆ ಮಾಡಲಾಗಿದೆ ಎಂದು ಕೋರ್ಟ್ ಆದೇಶ ನೀಡಿದರೂ ಜೈಲು ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಜೈಲಿನಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ಬಂಧಿಗಳಿದ್ದಾರೆ. ಒಬ್ಬೊಬ್ಬರಿಗೂ ಮನೆಯೂಟಕ್ಕೆ ಅವಕಾಶ ನೀಡಿದರೆ, ಜೈಲಿನ ಊಟ ಮಾಡುವವರು ಇರುವುದಿಲ್ಲ. ಎಲ್ಲರೂ ಮನೆ ಊಟ ಕೇಳುವ ಸ್ಥಿತಿ ಉದ್ಭವ ಆಗಲಿದೆ. ಹೀಗಾಗಿ ಮನೆ ಊಟ ನೀಡುವ ವಿಚಾರದಲ್ಲಿ ಮರು ಪರಿಶೀಲಿಸಲು ಕೋರ್ಟ್‌ಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇತರರಂತೆ ನಟ ದರ್ಶನ್ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆ. ನಟ ದರ್ಶನ್‌ಗೆ ಮನೆ ಊಟ ಅಗತ್ಯವಿಲ್ಲ, ಜೈಲಿನಲ್ಲಿ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಂದ ಕೋರ್ಟ್‌ಗೆ ವರದಿ ಸಲ್ಲಿಸಲು ಮುಂದಾಗಿದ್ದಾರೆ.