ತಪ್ಪಿದರೆ ಶಿಕ್ಷೆ ನಿಶ್ಚಿತ…!
ನವದೆಹಲಿ:
ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್) ಪ್ರಮಾಣೀಕರಿಸಿದ ಹೆಲ್ಮೆಟ್‌ಗಳನ್ನು ಮಾತ್ರ ದ್ವಿಚಕ್ರ ವಾಹನದಾರರು ಬಳಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಸಂಬಂಧ ಆದೇಶಗಳನ್ನು ಹೊರಡಿಸಿದೆ. ಈ ಆದೇಶ ಗುಣಮಟ್ಟವಿಲ್ಲದ ಹೆಲ್ಮೆಟ್ ಬಳಸುವುದನ್ನು ತಡೆಯಲಿದ್ದು, ಉತ್ತಮ ಗುಣಮಟ್ಟದ ಹೆಲ್ಮೆಟ್ ಗಳು ಮಾತ್ರ ವಾಹನದಾರನ್ನು ಅಪಘಾತಗಳಿಂದ ರಕ್ಷಿಸಲಿದೆ ಎಂದು ಸಚಿವಾಲಯ ಹೇಳಿದೆ.
ದೇಶದ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಹೆಲ್ಮೆಟ್‌ಗಳ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿ ನೀಡಿರುವ ಆದೇಶಗಳನ್ನು ಜಾರಿಗೆ ತರಲು ಸರ್ಕಾರ ಮತ್ತೊಂದು ಸಮಿತಿಯನ್ನು ನೇಮಿಸಿದೆ. ಇದರಲ್ಲಿ ಬಿಐಎಸ್ ಮತ್ತು ಏಮ್ಸ್ ನಂತಹ ಸಂಸ್ಥೆಗಳ ತಜ್ಞರು ಒಳಗೊಂಡಿದ್ದಾರೆ. ಈ ಸಮಿತಿ ಹಗುರವಾದ ಹೆಲ್ಮೆಟ್‌ಗಳ ಬಳಕೆಯನ್ನು ಶಿಫಾರಸು ಮಾಡಿದೆ.
ಬಿಐಎಸ್ ಪ್ರಮಾಣೀಕೃತ ಹೆಲ್ಮೆಟ್‌ಗಳ ಬಳಕೆ ಕಡ್ಡಾಯಗೊಳಿಸುವುದನ್ನು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟ ಸ್ವಾಗತಿಸಿದೆ. ಅಧಿಸೂಚನೆ ಜಾರಿಗೆ ಬಂದ ನಂತರ ಬಿಐಎಸ್ ದೃಢೀಕರಣ ಹೊಂದಿಲ್ಲದ ಹೆಲ್ಮೆಟ್ ಬಳಸುವುದು ಅಪರಾಧವಾಗಲಿದೆ ಎಂದು ಫೆಡರೇಶನ್ ಅಧ್ಯಕ್ಷ ಕೆ.ಕೆ.ಕಪಿಲ ಹೇಳಿದ್ದಾರೆ.