ಚಿಕ್ಕಮಗಳೂರು:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಅನಾರೋಗ್ಯದ ಕಾರಣದಿಂದಾಗಿ ನಿನ್ನೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಿಟಿ ರವಿಗೆ ಮೇ.10ರಂದು (ನಿನ್ನೆ, ಬುಧವಾರ) ಮಧ್ಯರಾತ್ರಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ತಿಂಗಳು ಏಪ್ರಿಲ್ 16ರಂದು ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಿ.ಟಿ.ರವಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕ್ಕಮಗಳೂರು ನಗರದ ಖಾಸಗಿ (ಆಶ್ರಯ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಮತ್ತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸಿ.ಟಿ.ರವಿ ಅವರಿಗೆ ಕಿಡ್ನಿ ಸ್ಟೋನ್‌ನಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದರು. ಅವರು ಲಿಂಗಾಯತ ಸಮಾವೇಶಕ್ಕೂ ಗೈರಾಗಿ ವೀಡಿಯೋ ಮೂಲಕ ಮತಯಾಚನೆ ಮಾಡಿದ್ದರು. ಇದೀಗ ಅವರು ಚುನಾವಣೆ ಮುಗಿಸಿ ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆ ಸೇರಿದ್ದಾರೆ.