ಬೆಂಗಳೂರು:
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕರಾದ ಯು.ಟಿ. ಖಾದರ್ ಮತ್ತಿತರ ಮುಖಂಡರ ವಿರುದ್ಧ ಬಿಜೆಪಿ ವತಿಯಿಂದ ಇಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರು ಬಸವಕಲ್ಯಾಣದ ಗಾಂಧಿವೃತ್ತದಲ್ಲಿ ಭಾಷಣ ಮಾಡುವ ವೇಳೆ “ನಗರ ಮತ್ತು ಗ್ರಾಮೀಣ ವಾಸಿಗಳ ಪ್ರತಿ ಕುಟುಂಬಕ್ಕೆ ಒಂದು ಮನೆ ಮಂಜೂರು ಮಾಡುತ್ತೇನೆ” ಎಂದು ಮತದಾರರಿಗೆ ಆಮಿಷ ತೋರಿರುತ್ತಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಹೆಚ್.ಡಿ. ಕುಮಾರಸ್ವಾಮಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, “ಭಾರತೀಯ ಜನತಾ ಪಕ್ಷದ ರಾಜ್ಯ ಸರಕಾರವು ಅನೈತಿಕ ಸರಕಾರ” ಎಂದು ಆಧಾರ ರಹಿತವಾಗಿ ಹೇಳಿದ್ದಾರೆ. ಇದು ಪಕ್ಷದ ತೇಜೋವಧೆ ಮಾಡುವ ದುರುದ್ದೇಶ ಹೊಂದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಮನವಿ ಮಾಡಲಾಗಿದೆ.
ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಬಹಿರಂಗ ಭಾಷಣ ಮಾಡುವ ವೇಳೆ, “ಭಾರತೀಯ ಜನತಾ ಪಾರ್ಟಿ ಬಹಳಷ್ಟು ಹಣ ಹಂಚಲು ಸಿದ್ದವಾಗಿದೆ, ಅವರಿಂದ ದುಡ್ಡು ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಓಟು ಹಾಕಿ” ಎಂದು ಹೇಳಿರುತ್ತಾರೆ. ಆದರೆ, ಬಿಜೆಪಿಯು ಯಾವುದೇ ಹಣ ಹಂಚಿಕೆ ಮಾಡುತ್ತಿಲ್ಲ. ಆದ್ದರಿಂದ, ಅವರು ನೀಡಿದ ಈ ಹೇಳಿಕೆಯು ಮತದಾರರನ್ನು ದಿಕ್ಕು ತಪ್ಪಿಸುವ ಮಾದರಿಯಲ್ಲಿದೆ. ಇದು ದುರುದ್ದೇಶದಿಂದ, ಆಧಾರರಹಿತವಾಗಿ ಮತ್ತು ಪಕ್ಷಕ್ಕೆ ತೇಜೋವಧೆ ಮಾಡುವ ದೃಷ್ಟಿಯಿಂದ ನೀಡಿದ ಪ್ರಚೋದನಾತ್ಮಕ ಹೇಳಿಕೆಯಾಗಿದೆ. ಎಂದು ದೂರಿನಲ್ಲಿ ಗಮನ ಸೆಳೆಯಲಾಗಿದೆ.
ಮಾಜಿ ಸಚಿವರಾದ ಯು.ಟಿ. ಖಾದರ್, ಬಸವರಾಜ ರಾಯರೆಡ್ಡಿ, ರಹೀಮ್ ಖಾನ್, ಮುಖಂಡರಾದ ವಿಜಯಸಿಂಗ್, ಮಾಜಿ ಶಾಸಕರಾದ ಮಧು ಬಂಗಾರಪ್ಪ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ, “ಬಿಜೆಪಿ ನೇತೃತ್ವದ ಸರಕಾರ ಭ್ರಷ್ಟ ಮತ್ತು ಭ್ರಷ್ಟಾಚಾರದ ಸರಕಾರವಾಗಿದೆ” ಎಂದು ದುರುದ್ದೇಶದಿಂದ ಆಧಾರರಹಿತವಾಗಿ ಮತ್ತು ಪಕ್ಷಕ್ಕೆ ತೇಜೋವಧೆ ಮಾಡುವ ದೃಷ್ಟಿಯಿಂದ ನೀಡಿದ ಪ್ರಚೋದನಾತ್ಮಕ ಹೇಳಿಕೆಯಾಗಿದೆ ಎಂದು ಬಿಜೆಪಿ ಮನವಿ ಪತ್ರದಲ್ಲಿ ತಿಳಿಸಿದೆ. ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗಿ ಕೋರಲಾಗಿದೆ.
ವಿಧಾನಪರಿಷತ್ ಸದಸ್ಯರಾದ ಡಾ|| ತೇಜಸ್ವಿನಿಗೌಡ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಶ್ರೀ ಎಸ್.ಎಸ್. ಮಿತ್ತಲ್‍ಕೋಡ್, ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಬಸವರಾಜ್ ಎಸ್, ಶ್ರೀ ಬಿ.ಟಿ. ದಯಾನಂದ, ಪ್ರಕೋಷ್ಠದ ಬೀದರ್ ಜಿಲ್ಲಾ ಸಂಚಾಲಕರಾದ ಶ್ರೀ ಸಂಜೀವಕುಮಾರ ಸಜ್ಜನ, ಮಂಡಲ ಸಂಚಾಲಕರಾದ ಶ್ರೀ ಅಮಿತ ಸಾಹು ಮತ್ತಿತರರ ನಿಯೋಗವು ಈ ಮನವಿಯನ್ನು ಚುನಾವಣಾಧಿಕಾರಿಗೆ ಸಲ್ಲಿಸಿತು.