ಕೊರೊನಾ ಪ್ರಕರಣ ಹೆಚ್ಚಳ ಸಂಬಂಧ ತಜ್ಞರ ಸಲಹೆ, ವರದಿಯನ್ನು ಸಿಎಂ ಗೆ ನೀಡಿ ಸಮರ್ಪಕ ಚರ್ಚೆ: ಸುಧಾಕರ್
ಬೆಂಗಳೂರು:
ಮೇ ತಿಂಗಳ ಮೊದಲ ವಾರದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಲಿದೆ. ಮೇ ಅಂತ್ಯದಲ್ಲಿ ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೋವಿಡ್ ನಿಯಂತ್ರಣ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೇ ತಿಂಗಳ ಕೊನೆವರೆಗೂ ಎಚ್ಚರಿಕೆಯಿಂದಿರಬೇಕು. ಮೇ ಮೊದಲ ವಾರದಲ್ಲಿ ಕೊರೊನಾ ಗರಿಷ್ಠ ಮಟ್ಟ (ಪೀಕ್) ತಲುಪಬಹುದು. ಮೇ ಅಂತ್ಯಕ್ಕೆ ಸ್ವಲ್ಪ ಕಡಿಮೆಯಾಗಬಹುದು. ಹೆಚ್ಚು ಪ್ರಕರಣ ಕಂಡುಬಂದರೆ ಅದಕ್ಕೆ ತಕ್ಕಂತೆ ಆಸ್ಪತ್ರೆ ಹಾಸಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ ಸಹಕಾರ ಪಡೆಯಬೇಕು. ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾಗಿ ಪ್ರಯಾಣಿಕರನ್ನು ಪರೀಕ್ಷಿಸುವ ಹಾಗೂ ಪರೀಕ್ಷಾ ವರದಿ ಪರಿಶೀಲಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಇವೆಲ್ಲವನ್ನೂ ವರದಿ ರೂಪದಲ್ಲಿ ನೀಡಲು ಸೂಚಿಸಲಾಗಿದೆ. ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ ಸಮರ್ಪಕವಾಗಿ ಚರ್ಚಿಸಲಾಗುವುದು. ಇದನ್ನು ಪರಿಗಣಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಖಾಸಗಿ ಆಸ್ಪತ್ರೆಗಳು ಕೂಡ ಸರ್ಕಾರೊಂದಿಗೆ ಕೆಲಸ ಮಾಡಿವೆ. ಟೆಲಿ ಐಸಿಯು ವ್ಯವಸ್ಥೆ ಮೊದಲಿಗೆ ನಮ್ಮ ಸರ್ಕಾರ ಆರಂಭಿಸಿದ್ದು, ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಈ ಸೇವೆ ನೀಡಿವೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಆರ್ಥಿಕ ಚಟುವಟಿಕೆಗೆ ತೊಂದರೆಯಾಗುವ ಯಾವುದೇ ಸಲಹೆ ನೀಡುವುದಿಲ್ಲ, ಆದರೆ ಗುಂಪುಗೂಡದಂತೆ ಕ್ರಮ ವಹಿಸಬೇಕೆಂದು ತಜ್ಞರು ಹೇಳಿದ್ದಾರೆ ಎಂದರು.
ಮಾದರಿ ಮಹಿಳೆಯರು
ರಾಜ್ಯದಲ್ಲಿ 61 ಲಕ್ಷ ಕೋವಿಡ್ ಲಸಿಕೆ ನೀಡಿದ್ದು, ಈ ಪೈಕಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಮಾದರಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ಲಸಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ರಾಜ್ಯಕ್ಕೆ 72 ಲಕ್ಷಕ್ಕೂ ಹೆಚ್ಚು ಲಸಿಕೆ ಬಂದಿದೆ. ರಾಜ್ಯದಲ್ಲಿ 61 ಲಕ್ಷ ಕೋವಿಡ್ ಲಸಿಕೆ ನೀಡಿದ್ದು, 53% ರಷ್ಟು ಮಹಿಳೆಯರಿಗೆ ನೀಡಲಾಗಿದೆ. ಆದ್ದರಿಂದ ಮಹಿಳೆಯರೇ ನಿಜವಾದ ಮಾದರಿ, ಮಾರ್ಗದರ್ಶಕರು. ಈ ಶತಮಾನದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ, ಅಸಮಾನತೆ ನಿವಾರಿಸಲು ಕೆಲಸ ಮಾಡಿದ ಜ್ಯೋತಿಬಾಫುಲೆ ಅವರ ಜನ್ಮದಿನ ಹಾಗೂ ಸಮಾನತೆ, ಸ್ವಾತಂತ್ರ್ಯ ಕ್ಕೆ ಹೋರಾಡಿದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಕರೆ ಮೇರೆಗೆ ಲಸಿಕೋತ್ಸವ ಮಾಡಲಾಗುತ್ತಿದೆ. ಲಸಿಕೆ ವಿಚಾರದಲ್ಲಿ ರಾಜಕೀಯ, ಧರ್ಮ, ಭಾಷೆ ಬೆರೆಸುವ ಕೆಲಸ ಮಾಡಬಾರದು. ಸಾಂಕೇತಿಕವಾಗಿ ಎಲ್ಲ ಧರ್ಮಗಳ ಮಹಿಳೆಯರಿಗೆ ಲಸಿಕೆ ನೀಡುವ ಮೂಲಕ ವಿಶೇಷ ಲಸಿಕೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.
ಪ್ರಧಾನಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ಕರ್ನಾಟಕ ಸರ್ಕಾರದ ಕೋವಿಡ್ ನಿಯಂತ್ರಣ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮ್ರೈಕೋ ಕಂಟೇನ್ಮೆಂಟ್ ಜೋನ್ ಹೆಚ್ಚಿಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.