ನಿತಿನ್ ನಬಿನ್ ಅವರ ಹೊಸ ರಾಷ್ಟ್ರೀಯ ತಂಡದಲ್ಲೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿ ಬಿ.ಎಲ್. ಸಂತೋಷ್ ಮುಂದುವರಿಕೆ
ನವದೆಹಲಿ, ಆಗಸ್ಟ್ 17: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಪ್ರಕಟಿಸಲಾದ ಪಕ್ಷದ ನೂತನ ರಾಷ್ಟ್ರೀಯ ತಂಡದಲ್ಲಿ ಬಿ.ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಮುಂದುವರಿಸಲಾಗಿದೆ.
ಬಿಜೆಪಿ ಕೇಂದ್ರ ಕಚೇರಿ ಬಿಡುಗಡೆ ಮಾಡಿರುವ ನೇಮಕಾತಿ ಪಟ್ಟಿಯ ಪ್ರಕಾರ, ದೆಹಲಿಯ ಬಿ.ಎಲ್. ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿ ಮುಂದುವರಿಯಲಿದ್ದಾರೆ. ಮುಂಬೈನ ಶಿವಪ್ರಕಾಶ್ ಮತ್ತು ಚಂಡೀಗಢದ ಸೌದಾನ್ ಸಿಂಗ್ ಅವರನ್ನು ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ (ಸಂಘಟನೆ)ಗಳಾಗಿ ನೇಮಕ ಮಾಡಲಾಗಿದೆ.
ತಕ್ಷಣದಿಂದಲೇ ಜಾರಿಗೆ ಬರುವ ಈ ನೇಮಕಾತಿಗಳಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, ಎಂಟು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು 16 ರಾಷ್ಟ್ರೀಯ ಕಾರ್ಯದರ್ಶಿಗಳು ಸೇರಿದ್ದಾರೆ. ಪಂಜಾಬ್ನ ತರುಣ್ ಚುಗ್ ಅವರನ್ನು ರಾಷ್ಟ್ರೀಯ ಕಚೇರಿ ಪ್ರಭಾರಿಯಾಗಿ ಹಾಗೂ ಉತ್ತರಾಖಂಡದ ಮಹೇಂದ್ರ ಪಾಂಡೆ ಅವರನ್ನು ರಾಷ್ಟ್ರೀಯ ಕಚೇರಿ ಮಂತ್ರಿಯಾಗಿ ನೇಮಕ ಮಾಡಲಾಗಿದೆ.
ಮಧ್ಯಪ್ರದೇಶದ ಕವಿತಾ ಪಾಟಿದಾರ್, ಕೇರಳದ ಕೆ. ಸುರೇಂದ್ರನ್, ಉತ್ತರ ಪ್ರದೇಶದ ಭೋಲಾ ಸಿಂಗ್, ಜಾರ್ಖಂಡ್ನ ಪ್ರದೀಪ್ ವರ್ಮಾ, ಗುಜರಾತ್ನ ಜಯದೀಶ್ ಈಶ್ವರಭಾಯಿ ಪಟೇಲ್, ದೆಹಲಿಯ ಸಂದೀಪ್ ಪಾಠಕ್, ನಾಗಾಲ್ಯಾಂಡ್ನ ಫಾಂಗ್ನಾನ್ ಕೊನ್ಯಾಕ್, ಉತ್ತರ ಪ್ರದೇಶದ ಸಂಗೀತಾ ಯಾದವ್, ಕೇರಳದ ಅನಿಲ್ ಆಂಟನಿ, ತಮಿಳುನಾಡಿನ ಎಂ. ವೆಂಕಟೇಶನ್, ಪಶ್ಚಿಮ ಬಂಗಾಳದ ಮನೋಜ್ ಟಿಗ್ಗಾ, ಬಿಹಾರದ ಸಿದ್ಧಾರ್ಥ್ ಶಂಭು, ದೆಹಲಿಯ ಸ್ವದೇಶ್ ಸಿಂಗ್, ಅಸ್ಸಾಂನ ಮುಗಾಕಾ ದೇವ್ ವರ್ಮನ್, ಗುಜರಾತ್ನ ರೋಹನ್ ಗುಪ್ತಾ ಮತ್ತು ದೆಹಲಿಯ ಜಯ ಪ್ರಕಾಶ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಮಹಾರಾಷ್ಟ್ರದ ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಕೋಶಾಧ್ಯಕ್ಷರಾಗಿ ಹಾಗೂ ರಾಜಸ್ಥಾನದ ರಾಜೇಶ್ ಮಂಗಲ್ ಅವರನ್ನು ರಾಷ್ಟ್ರೀಯ ಸಹ ಕೋಶಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ದೆಹಲಿಯ ರಾಜೀವ್ ಬಬ್ಬರ್ ಅವರನ್ನು ನಾರ್ತ್ ಈಸ್ಟ್ ಸಂಯೋಜಕರಾಗಿ ನೇಮಿಸಲಾಗಿದೆ. ಮಧ್ಯಪ್ರದೇಶದ ವಿಷ್ಣು ದತ್ತ ಶರ್ಮಾ ಅವರನ್ನು ಪ್ರಕೋಷ್ಠ ಸಂಕುಲ ಸಂಯೋಜಕರಾಗಿ ಹಾಗೂ ಬಿಹಾರದ ಋತುರಾಜ್ ಸಿನ್ಹಾ ಮತ್ತು ಆಂಧ್ರ ಪ್ರದೇಶದ ವಿಷ್ಣು ವರ್ಧನ್ ರೆಡ್ಡಿ ಅವರನ್ನು ಪ್ರಕೋಷ್ಠ ಸಂಕುಲ ಸಹ ಸಂಯೋಜಕರಾಗಿ ನೇಮಕ ಮಾಡಲಾಗಿದೆ.
ನೂತನ ರಾಷ್ಟ್ರೀಯ ಪದಾಧಿಕಾರಿಗಳಿಗೆ Xನಲ್ಲಿ ಅಭಿನಂದನೆ ಸಲ್ಲಿಸಿದ ನಿತಿನ್ ನಬಿನ್, ಅನುಭವ ಮತ್ತು ಶಕ್ತಿಯಿಂದ ಸಮೃದ್ಧವಾಗಿರುವ ಈ ತಂಡವು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಂಘಟನೆಗೆ ಹೊಸ ವೇಗ ನೀಡಲಿದೆ ಎಂದು ಹೇಳಿದ್ದಾರೆ.
ತಂಡದ ಎಲ್ಲ ಸದಸ್ಯರು ಕಾರ್ಯಕರ್ತರ ಭಾವನೆಯೊಂದಿಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ, ‘ವಿಕಸಿತ ಭಾರತ’ ಸಂಕಲ್ಪ ಮತ್ತು ರಾಷ್ಟ್ರಸೇವೆಯ ಧ್ಯೇಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
