ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸಕ್ಕೆ ಬ್ಲಿಂಕಿಟ್ ಆ್ಯಪ್ ಮೂಲಕ ಚಾಕು, ಚೂರಿ ಸೇರಿದಂತೆ ಮಾರಕ ವಸ್ತುಗಳನ್ನು ಆರ್ಡರ್ ಮಾಡಿ ಕಳುಹಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ನಿಯೋಗ ಶನಿವಾರ ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ಸಲ್ಲಿಸಿತು. ಇದಕ್ಕೆ ಕಾರಣರಾದವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡೀಪಾರು ಮಾಡಬೇಕು ಎಂದು ಪಕ್ಷ ಆಗ್ರಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ ಹಾಗೂ ಪಕ್ಷದ ಇತರ ಮುಖಂಡರು ನಿಯೋಗದಲ್ಲಿದ್ದರು.
ಬಿಜೆಪಿ ಬಿಡುಗಡೆ ಮಾಡಿರುವ ದೂರಿನ ಪ್ರಕಾರ, 10ರಿಂದ 20 ಮೊಬೈಲ್ ಸಂಖ್ಯೆಗಳ ಮೂಲಕ ಎನ್ಎಸ್ಯುಐ ಸದಸ್ಯರು ಚಾಕು, ಚೂರಿ ಹಾಗೂ ಅಪಾಯಕಾರಿ ವಸ್ತುಗಳನ್ನು ಬುಕ್ ಮಾಡಿದ್ದರು. ಕಾಂಗ್ರೆಸ್ನ 8ರಿಂದ 10 ಮಂದಿ ನಾರಾಯಣಸ್ವಾಮಿ ಅವರ ಮನೆಯ ಬಳಿ ಬಂದು ಗೇಟ್ ಸುತ್ತುವರಿದು ಭಯ ಹುಟ್ಟಿಸುತ್ತಿದ್ದರು ಎಂದೂ ದೂರಿನಲ್ಲಿ ಆರೋಪಿಸಲಾಗಿದೆ. ಎನ್ಎಸ್ಯುಐ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಅಧ್ಯಕ್ಷರು, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇದಕ್ಕೆ ನೇರ ಹೊಣೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಹಲವು ಬಾರಿ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ; ನಾರಾಯಣಸ್ವಾಮಿ ಅವರ ಮನೆಯ ಅಕ್ಕಪಕ್ಕದಲ್ಲಿ ಅನೇಕ ಸಚಿವರು ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮನೆಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬ್ಲಿಂಕಿಟ್ ಸಂಸ್ಥೆ ವಸ್ತುಗಳನ್ನು ಪಾರ್ಸಲ್ ಮಾಡುವ ಮುನ್ನ ಪರಿಶೀಲಿಸಬೇಕಿತ್ತು. ಪರಿಶೀಲಿಸದೇ ಮಾರಕ ವಸ್ತುಗಳನ್ನು ತಲುಪಿಸಿರುವುದು ಸಂಶಯಕ್ಕೆ ಕಾರಣವಾಗಿದ್ದು, ಸಂಸ್ಥೆಯ ಪರವಾನಗಿ ರದ್ದುಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಬ್ಲಿಂಕಿಟ್ನಲ್ಲಿ ಚಾಕು, ಚೂರಿಗಳನ್ನು ಆರ್ಡರ್ ಮಾಡಿ ‘ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್, ನಂಬರ್ 6’ ವಿಳಾಸಕ್ಕೆ ಹಣ ಪಾವತಿಸದೇ ಕಳುಹಿಸಲಾಗಿದೆ ಎಂದರು. ತಮ್ಮ ಆಪ್ತ ಸಹಾಯಕ ಮಲ್ಲಪ್ಪ ಅವರಿಗೂ ಪಾರ್ಸಲ್ ಕಳುಹಿಸಲಾಗಿದ್ದು, ಬ್ಲಿಂಕಿಟ್ನಿಂದ ಸಾಲು ಸಾಲು ಕರೆಗಳು ಹಾಗೂ ವಾಟ್ಸಾಪ್ ಸಂದೇಶಗಳು ಬಂದಿವೆ ಎಂದು ತಿಳಿಸಿದರು. “ಇದರಿಂದ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಚಾಕು-ಚೂರಿಗೆ ನಾವು ಹೆದರುವುದಿಲ್ಲ” ಎಂದ ಅವರು, ಇದನ್ನು ನೋಡಿಕೊಳ್ಳಲು ನ್ಯಾಯಾಲಯ ಮತ್ತು ವ್ಯವಸ್ಥೆ ಇದೆ ಎಂದರು. ಪೊಲೀಸರೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದರು.
ತಮ್ಮ ಮನೆ ಸೂಕ್ಷ್ಮ ಪ್ರದೇಶದಲ್ಲಿದ್ದು, ಅಲ್ಲಿ ಮೂವರು ನ್ಯಾಯಾಧೀಶರು ಮತ್ತು ಸಚಿವರ ಮನೆಗಳಿವೆ; ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾರೆ ಎಂದರೆ ಸರ್ಕಾರವೇ ಅವರನ್ನು ಕಳುಹಿಸುತ್ತಿದೆ ಎಂದರ್ಥ ಎಂದು ನಾರಾಯಣಸ್ವಾಮಿ ಹೇಳಿದರು. ಕಾಂಗ್ರೆಸ್ ಇದೇ ರೀತಿ ಅರಾಜಕತೆ ಸೃಷ್ಟಿಸಿದರೆ ಜನರು ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬೀ ಸಮುದ್ರಕ್ಕೆ ಎಸೆಯುತ್ತಾರೆ ಎಂದು ಕೋಲಾರದಲ್ಲಿ ತಾವು ಹೇಳಿದ್ದು ಪಕ್ಷದ ಬಗ್ಗೆಯೇ ಹೊರತು ಕಾರ್ಯಕರ್ತರ ಬಗ್ಗೆ ಅಲ್ಲ; ಅದನ್ನು ಅರ್ಥ ಮಾಡಿಕೊಳ್ಳದೇ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದೂ ಅವರು ಹೇಳಿದರು.
ವಿಪಕ್ಷ ನಾಯಕರ ಮನೆಗೆ ನೂರಾರು ಚಾಕು, ಚೂರಿಗಳನ್ನು ಕಳುಹಿಸುವ ಮೂಲಕ ಕಾಂಗ್ರೆಸ್ ತನ್ನ ‘ಗೂಂಡಾ ಸಂಸ್ಕೃತಿ’ಯನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ ಎಂದು ವಿಜಯೇಂದ್ರ ಆರೋಪಿಸಿದರು. ಆಯುಕ್ತರ ಭೇಟಿಯ ಬಳಿಕ ಮಾತನಾಡಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೂರು ನೀಡಲಾಗಿದ್ದು, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದೇವೆ ಎಂದರು. “ಮುಂದಿನ ತನಿಖೆಯನ್ನು ಕಾದು ನೋಡುತ್ತೇವೆ” ಎಂದು ತಿಳಿಸಿದರು.
ಚಾಕು, ಚೂರಿ ಕಳುಹಿಸುವುದು ಕೊಲೆ ಯತ್ನಕ್ಕೆ ಸಮ. ಪೊಲೀಸರು ಕೂಡಲೇ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು ಎಂದು ಆರ್. ಅಶೋಕ ಆಗ್ರಹಿಸಿದರು. ಕಾನೂನು ಕಾಪಾಡಬೇಕಾದ ಆಡಳಿತ ಪಕ್ಷವೇ ಕಾನೂನು-ಸುವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಟೀಕಿಸಿದರು.
ಈ ಬಗ್ಗೆ ತೀಕ್ಷ್ಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯೇಂದ್ರ, ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಇದೆ ಎಂದು ಆರೋಪಿಸಿದರು. ಬಿಜೆಪಿ ಕನಿಷ್ಠ 125ರಿಂದ 130 ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದ್ದು, ಜೆಡಿಎಸ್ ಜೊತೆಗೂಡಿ ಮುನ್ನಡೆಯಲಿದೆ ಎಂದೂ ಹೇಳಿದರು.
ಇದನ್ನೂ ಓದಿ: ಎಸ್ಐಆರ್ನಲ್ಲಿ ಹಸ್ತಕ್ಷೇಪ ಆರೋಪ: ರಾಜ್ಯಪಾಲರಿಗೆ ಕರ್ನಾಟಕ ಎನ್ಡಿಎ ನಿಯೋಗದ ದೂರು
