ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ನವೆಂಬರ್ 7ರಂದು ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾಗಿರುವ ಪಾವಗಡ–ಕೊತ್ತಾಲಂ–ಮಡಕಸಿರ–ಮಧುಗಿರಿ–ಕೊರಟಗೆರೆ (78 ಕಿ.ಮೀ.) ವಿಭಾಗದ ಕಾಮಗಾರಿಗಳನ್ನು ಪರಿಶೀಲಿಸಿದರು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಈ ಸಂದರ್ಭದಲ್ಲಿ ಕೊರಟಗೆರೆ, ಮಧುಗಿರಿ, ಬೇಡತ್ತೂರು, ಮಡಕಸಿರ ಮತ್ತು ಕೊತ್ತಾಲಂನಲ್ಲಿ ರೈಲು ನಿಲ್ದಾಣಗಳ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಟ್ಟು 207 ಕಿ.ಮೀ. ಉದ್ದದ ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗದಲ್ಲಿ ಇದುವರೆಗೆ 110 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ದೊಡ್ಡಹಳ್ಳಿ–ರಾಯದುರ್ಗ ನಡುವಿನ 83 ಕಿ.ಮೀ. ಮಾರ್ಗವನ್ನು ಎರಡು ಹಂತಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಅಲ್ಲದೆ ತುಮಕೂರು–ಊರುಕೆರೆ (11 ಕಿ.ಮೀ.) ಹಾಗೂ ದೊಡ್ಡಹಳ್ಳಿ–ಪಾವಗಡ (16 ಕಿ.ಮೀ.) ನಡುವಿನ ಕಾಮಗಾರಿಗಳು ಪೂರ್ಣಗೊಂಡಿದ್ದು, ಮುಖ್ಯ ರೈಲ್ವೆ ಸುರಕ್ಷತಾ ಆಯುಕ್ತರು (ಸಿಸಿಆರ್ಎಸ್) ಶಾಸನಬದ್ಧ ಸುರಕ್ಷತಾ ಪರಿಶೀಲನೆ ನಡೆಸಿದ್ದಾರೆ ಎಂದು ರೈಲ್ವೆ ತಿಳಿಸಿದೆ.
ಮುಖ್ಯ ಎಂಜಿನಿಯರ್ (ನಿರ್ಮಾಣ) ಪ್ರಸಾದ್, ಉಪ ಮುಖ್ಯ ಎಂಜಿನಿಯರ್ (ನಿರ್ಮಾಣ) ಸೂರಜ್ ಕುಮಾರ್ ಸೇರಿದಂತೆ ರೈಲ್ವೆ ಅಧಿಕಾರಿಗಳು ಪರಿಶೀಲನೆಯ ವೇಳೆ ಉಪಸ್ಥಿತರಿದ್ದರು.
