Home ರಾಜಕೀಯ 17ರಂದು ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ರಾಜ್ಯ ಸಮಾವೇಶ

17ರಂದು ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ರಾಜ್ಯ ಸಮಾವೇಶ

50
0

ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಭಾಗವಹಿಸಲಿದ್ದಾರೆ

ಬೆಂಗಳೂರು:

ಬೆಳಗಾವಿಯಲ್ಲಿ ಜನವರಿ 17ರಂದು ಬಿಜೆಪಿ ವತಿಯಿಂದ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಭಾಗವಹಿಸಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ, ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ಕುಮಾರ್ ಕಟೀಲ್, ಸಚಿವರು, ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರೂ ಆದ ಶ್ರೀ ಎನ್.ರವಿಕುಮಾರ್ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಶ್ರೀ ಕೆ. ಗೋಪಾಲಯ್ಯ ಅವರು ಶನಿವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 11ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಗೋಪೂಜೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಮೂಲಕ ಜನಸೇವಕ ಸಮಾವೇಶದ ಉದ್ಘಾಟನೆ ನಡೆಯಲಿದೆ. ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಲ್ಲೂ ಬಿಜೆಪಿ ಅಧಿಕಾರ ಪಡೆಯುವ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇದಾಗಿದೆ ಎಂದು ವಿವರ ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‌ಕುಮಾರ್ ಕಟೀಲ್, ಪಂಚಾಯತ್‌ರಾಜ್ ಸಚಿವ ಶ್ರೀ ಕೆ.ಎಸ್.ಈಶ್ವರಪ್ಪ, ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ, ಕೈಗಾರಿಕಾ ಸಚಿವ ಶ್ರೀ ಜಗದೀಶ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಐದು ತಂಡಗಳು ರಾಜ್ಯದಾದ್ಯಂತ ಜನವರಿ 11ರಿಂದ 13ರವರೆಗೆ ಜನಸೇವಕ ಸಮಾವೇಶದಲ್ಲಿ ಭಾಗವಹಿಸಲಿವೆ. ಪ್ರತಿದಿನ 10 ಜಿಲ್ಲೆಗಳಲ್ಲಿ ಸಮಾವೇಶ ನಡೆಯಲಿದೆ. ಪಕ್ಷದ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 13ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ಕುಮಾರ್ ಕಟೀಲ್ ಅವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಪ್ರತಿಯೊಂದು ಜನಸೇವಕ ಸಮಾವೇಶದಲ್ಲಿ ಒಂದು ಸಾವಿರದಿಂದ ಮೂರು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಮೂಲಕ ಪಕ್ಷದ ಸಂಘಟನೆ, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ತಯಾರಿ ನಡೆಯಲಿದೆ ಎಂದರು.

ಬಿಜೆಪಿ ಬಗ್ಗೆ ನಗರ ಕೇಂದ್ರಿತ ಹಾಗೂ ಪಟ್ಟಣ ಕೇಂದ್ರಿತ ಪಕ್ಷ ಎಂಬ ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕೆಗೆ ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜನತೆ ಸಮರ್ಪಕ ಉತ್ತರ ನೀಡಿದ್ದಾರೆ. ಜೆಡಿಎಸ್- ಕಾಂಗ್ರೆಸ್ ಸೇರಿದರೆ ಗೆದ್ದ ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸರ್ವ ಸ್ಪರ್ಶಿ ಸರ್ವ ವ್ಯಾಪಿ ಪಕ್ಷವಾಗಿ ಹೊರಹೊಮ್ಮಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.

ಮಂಡ್ಯದಲ್ಲಿ ಬಿಜೆಪಿ ವಶದಲ್ಲಿ 5 ಪಂಚಾಯಿತಿ ಇದ್ದುದು ಈಗ 40ಕ್ಕೆ ಏರಿದೆ. ಹಾಸನದಲ್ಲಿ ಹಿಂದೆ160-170 ಸೀಟ್ ಇದ್ದುದು ಈಗ 817ಕ್ಕೂ ಹೆಚ್ಚು ಸೀಟ್ ಬಿಜೆಪಿ ಬೆಂಬಲಿತರ ಪಾಲಾಗಿದೆ. ಹಳೆ ಮೈಸೂರಲ್ಲೂ 1,200ಕ್ಕೂ ಹೆಚ್ಚು ಸೀಟ್, ಚಾಮರಾಜನಗರದಲ್ಲೂ 1,100ಕ್ಕೂ ಹೆಚ್ಚು ಸೀಟ್, ಒಂದೂ ಸೀಟ್ ಇರದ ಕನಕಪುರ ತಾಲ್ಲೂಕಿನಲ್ಲಿ ಈ ಬಾರಿ 50 ಸೀಟ್‌ನಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು ಲಭಿಸಿದೆ ಎಂದರು. ರೇವಣ್ಣ ಅವರು ಶಾಸಕರಾಗಿರುವ ಹೊಳೆನರಸೀಪುರ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಸೀಟ್ ನಮ್ಮದಾಗಿದೆ ಎಂದು ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಸಭಾಪತಿ ಸ್ಥಾನ ಕುರಿತಂತೆ ನಡೆದ ಗಲಾಟೆ ಕುರಿತು ಪರಿಶೀಲಿಸಲು ಸದನ ಸಮಿತಿಯನ್ನು ಸಭಾಪತಿಗಳಾದ ಶ್ರೀ ಪ್ರತಾಪಚಂದ್ರ ಶೆಟ್ಟಿ ಅವರು ರಚಿಸಿದ ಸದನ ಸಮಿತಿ ಏಕಪಕ್ಷೀಯವಾಗಿದೆ. ಸದನ ನಡೆಯುವಾಗ ಎಲ್ಲ ಪಕ್ಷದವರ ನಾಯಕರ ಅಭಿಪ್ರಾಯ ಪಡೆದು ಸಹಮತದಿಂದ ಸಮಿತಿ ರಚಿಸಬೇಕಿತ್ತು.

ಬಿಜೆಪಿ ಸದಸ್ಯರಾದ ಎಚ್.ವಿಶ್ವನಾಥ್ ಮತ್ತು ಸಂಕನೂರು ಅವರು ಈ ಸಮಿತಿಗೆ ರಾಜೀನಾಮೆ ಕೊಟ್ಟಿದ್ದಾರೆ. ಸದನ ಸಮಿತಿಯ ಅಧ್ಯಕ್ಷರಾಗಿರುವ ಮರಿತಿಬ್ಬೇಗೌಡರು ಜೆಡಿಎಸ್‌ನಲ್ಲಿ ಇದ್ದಾರೋ ಕಾಂಗ್ರೆಸ್‌ನಲ್ಲಿದ್ದಾರೋ ಗೊತ್ತಿಲ್ಲ. ನಿಯಮಾವಳಿ ಉಲ್ಲಂಘಿಸಿ ರಚಿಸಲಾದ ಸದನ ಸಮಿತಿಯನ್ನು ಭಾರತೀಯ ಜನತಾ ಪಾರ್ಟಿ ವಿರೋಧಿಸುತ್ತದೆ ಎಂದು ತಿಳಿಸಿದರು.

ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮಾಧ್ಯಮ ವಿಭಾಗದ ಸಂಚಾಲಕರಾದ ಶ್ರೀ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here