Home ಬೆಂಗಳೂರು ನಗರ ಸಮರ್ಪಕ ಯೋಜನೆ ರೂಪಿಸಿಕೊಂಡು ಲಸಿಕೆ ಹಂಚಲು‌ ಕ್ರಮವಹಿಸಿ: ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ

ಸಮರ್ಪಕ ಯೋಜನೆ ರೂಪಿಸಿಕೊಂಡು ಲಸಿಕೆ ಹಂಚಲು‌ ಕ್ರಮವಹಿಸಿ: ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ

50
0

ಬೆಂಗಳೂರು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಸಂಬಂಧ ಸರಿಯಾದ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ನೀಡಲು 1,507 ಕೇಂದ್ರಗಳನ್ನು ಗುರುತಿಸಿದ್ದು, ಪ್ರತಿ 5 ಕೇಂದ್ರಗಳಿಗೊಬ್ಬರಂತೆ ಒಟ್ಟು 300 ಸೆಕ್ಟರ್ ಅಧಿಕಾರಿಗಳನ್ನು ಗುರುತಿಸಿ ನಿಯೋಜನೆ ಮಾಡಬೇಕೆಂದು ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಹಂಚಿಕೆ ಹಾಗೂ ಕೋವಿಡ್ ಸಂಪರ್ಕ ಪತ್ತೆ ವಿಚಾರವಾಗಿ ಆಯುಕ್ತರು ಮಲ್ಲೇಶ್ವರಂ ಐ.ಪಿ.ಪಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ, ಲಸಿಕೆ ಹಂಚಿಕೆ ಮಾಡುವ ಕೇಂದ್ರಗಳಿಗೆ ಗುರುತಿಸುವ ಸೆಕ್ಟರ್ ಅಧಿಕಾರಿಗಳಿಗೆ ಏನೆಲ್ಲಾ ಜವಾಬ್ದಾರಿಗಳಿರಲಿವೆ ಎಂಬುದರ ಬಗ್ಗೆ ತರಬೇತಿ ನೀಡಿ ಸಮರ್ಪಕ ಮಾಹಿತಿ ನೀಡಬೇಕು. ನೇಮಕ ಮಾಡುವ ಅಧಿಕಾರಿಗಳಿಗೆ ಲಸಿಕಾ ಕೇಂದ್ರಗಳ ಮಾರ್ಗ ನಕ್ಷೆ, ವಾಹನದ ವ್ಯವಸ್ಥೆ ಮಾಡಬೇಕು.

WhatsApp Image 2021 01 09 at 17.20.18 1

ಲಸಿಕೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಲಸಿಕೆ ಹಂಚಿಕೆ ಸಂಬಂಧ ಒಂದೇ ರೀತಿಯ ವ್ಯವಸ್ಥೆ(System) ಮಾಡಿಕೊಂಡು ಲಸಿಕೆ ಹಂಚಿಕೆ ಮಾಡಲು ಯೋಜನೆ(Plan) ರೂಪಿಸಿಕೊಳ್ಳಬೇಕು. ಪ್ರತಿ ಕೇಂದ್ರದಲ್ಲಿ‌ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಲಸಿಕೆ ವಿತರಣೆ ಕೇಂದ್ರಕ್ಕೂ ಆಂಬ್ಯುಲೆನ್ಸ್ ಹಾಗೂ ಆಸ್ಪತ್ರೆಯನ್ನು ಲಿಂಕ್ ಮಾಡಿರಬೇಕು. ಲಸಿಕೆ ನೀಡುವ ಸಮಯದಲ್ಲಿ ಫಲಾನುಭವಿಗಳ ಆರೋಗ್ಯದಲ್ಲಿ ಏರುಪೇರಾದಲ್ಲಿ ಕೂಡಲೆ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದು, ಎರಡನೇ ಹಂತದಲ್ಲಿ ಕೋವಿಡ್ ಸಮಯದಲ್ಲಿ ಕಾರ್ಯನಿರ್ವಹಿಸಿರುವ ಪಾಲಿಕೆ ಸಿಬ್ಬಂದಿ, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಕಂದಾಯ ಅಧಿಕಾರಿಗಳು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಲಸಿಕೆ ನೀಡಲಾಗುವುದು. ಮೂರನೇ ಹಂತದಲ್ಲಿ ಮತದಾರರ ಪಟ್ಟಿಯ ಆಧಾರದಲ್ಲಿ ಗುರುತಿಸಿ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು 50 ವರ್ಷಕ್ಕಿಂತ ಕಡಿಮೆಯಿರುವ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ(ಕೋಮ್ ಆರ್ಬಿಟ್) ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ.

WhatsApp Image 2021 01 09 at 17.20.18

ನಗರದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲು 1,75,000 ಆರೋಗ್ಯ ಕಾರ್ಯಕರ್ತರನ್ನು ಕೋವಿನ್ ಪೋರ್ಟಲ್ ನಲ್ಲಿ ದಾಖಲಿಸಲಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ ಹಾಗೂ ಪರಿವೀಕ್ಷಣಾ ಕೊಠಡಿಗಳಿರಲಿವೆ. ಲಸಿಕೆ ನೀಡುವ ಕೇಂದ್ರಗಳಲ್ಲಿ ನಿರ್ದೇಶನ ನಾಮಫಲಕ, ಕುಡಿಯುವ ನೀರು, ಕೂರಲು ಕುರ್ಚಿ, ವೈ-ಫೈ, ಲ್ಯಾಪ್ ಟಾಪ್/ಕಂಪ್ಯೂಟರ್ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಈ ಸಂಬಂಧ ವಲಯ ಜಂಟಿ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಲಸಿಕೆ ನೀಡುವ ಕೇಂದ್ರಗಳಿಗೆ ಭೇಟಿ ಎಲ್ಲಾ ವ್ಯವಸ್ಥೆ ಸರಿಯಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಯುಕೆ ಯಿಂದ ವಿಮಾನ ಬರಲು ಕೇಂದ್ರ ಸರ್ಕಾರ ಅನುಮತಿ

ಕೇಂದ್ರ ಸರ್ಕಾರದ ಸೂಚನೆಯಂತೆ ಯುಕೆಯಿಂದ ಬರುತ್ತಿರುವ ಪ್ರಯಾಣಿಕರಿಗೆ ಇಂದಿನಿಂದ ಮತ್ತೆ ವಿಮಾನಗಳು ಆರಂಭವಾಗಿದೆ. ಬೆಂಗಳೂರಿಗೆ ಇಂದು ರಾತ್ರಿ‌ ಒಂದು ವಿಮಾನ ಬರುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮಾರ್ಗಸೂಚಿಗಳ ಪ್ರಕಾರ 72 ಗಂಟೆ ಮೊದಲು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ವಿಮಾನದಲ್ಲಿ ಬರಲು ಅನುಮತಿ ನೀಡಲಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮತ್ತೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುತ್ತದೆ. ರಿಸಲ್ಟ್ ಬರುವವರೆಗೆ ಯಾರನ್ನೂ ಹೊರಗಡೆ ಬಿಡುವುದಿಲ್ಲ. ವಿಮಾನ ನಿಲ್ದಾಣದ ಬಳಿ ಪಾಸಿಟಿವ್ ಬಂದವರಿಗೆ ಸಾಂಸ್ಥಿಕ ಗೃಹಬಂಧನದಲ್ಲಿರಿಸಲಾಗುತ್ತದೆ. ಜೊತೆಗೆ ಪಾಸಿಟಿವ್ ಬಂದವರ ಅಕ್ಕ-ಪಕ್ಕ, ಹಿಂದೆ-ಮುಂದೆಯಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿಕ ಗೃಹಬಂಧನದಲ್ಲಿರಿಸಲಾಗುತ್ತದೆ. ಅಲ್ಲದೆ ನೆಗೆಟಿವ್ ಬಂದವರು ಮನೆಯಲ್ಲಿಯೇ 14 ದಿನ ಗೃಹಬಂಧನದಲ್ಲಿರಬೇಕು. ಗೃಹಬಂಧನದಲ್ಲಿರುವವರಿಗೆ ಪಾಸಿಟಿವ್ ಬಂದರೆ ವಿಮಾನದಲ್ಲಿ ಸೀಟ್ ಅಕ್ಕ-ಪಕ್ಕ, ಹಿಂದೆ-ಮುಂದೆಯಿರುವ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿಕ ಗೃಹಬಂಧನದಲ್ಲಿರಿಸಲು ವ್ಯವಸ್ಥೆ ಮಾಡಲಾಗಿರುತ್ತದೆ. ಗೃಹಬಂಧನದಲ್ಲಿರುವವರ ಮೇಲೆ ಪಾಲಿಕೆ ಸಿಬ್ಬಂದಿ ನಿಗಾವಹಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರುಗಳಾದ ಮನೋಜ್ ಜೈನ್,ರಾಜೇಂದ್ರ ಚೋಳನ್, ಜೆ.ಮಂಜುನಾಥ್, ಬಸವರಾಜು, ತುಳಸಿ ಮದ್ದಿನೇನಿ, ಎಲ್ಲಾ ವಲಯ ಜಂಟಿ ಆಯುಕ್ತರುಗಳು, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆ ರೋಗ್ಯ) ಡಾ. ವಿಜೇಂದ್ರ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here