ಬೆಂಗಳೂರು: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಸಂಡೂರು, ಶಿಗ್ಗಾವಿಯಲ್ಲಿ ಬಿಜೆಪಿ, ಚನ್ನಪಟ್ಟಣದಲ್ಲಿ ಎನ್‍ಡಿಎ ಅಭ್ಯರ್ಥಿಯ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಡೂರಿನಲ್ಲಿ ಇಂದು ಅಭ್ಯರ್ಥಿ ರಾಜ್ಯ ಎಸ್‍ಟಿ ಮೋರ್ಚಾ ಅಧ್ಯಕ್ಷ ಮತ್ತು ಯುವ ಮುಖಂಡ ಬಂಗಾರು ಹನುಮಂತು ಅವರ ನಾಮಪತ್ರ ಸಲ್ಲಿಕೆ ಬೃಹತ್ ಮೆರವಣಿಗೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಂಡೂರಿನಲ್ಲಿ ಬಿಜೆಪಿ ಯುವ ಮುಖಂಡ ಬಂಗಾರು ಹನುಮಂತು ಅವರು ಅಭ್ಯರ್ಥಿಯಾಗಿದ್ದು, ಬಿಜೆಪಿ- ಜೆಡಿಎಸ್ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಗೆಲ್ಲಿಸಲಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಹಣ ಚೆಲ್ಲಿದ್ದರಿಂದ ಬಳ್ಳಾರಿಯಲ್ಲಿ ಶ್ರೀರಾಮುಲು ಅವರಿಗೆ ಸೋಲಾಗಿತ್ತು. ಇದರ ವಿರುದ್ಧ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದೆ. ಆಯೋಗವು ಸಂಸದ ಇ.ತುಕಾರಾಂ ಅವರ ವಿರುದ್ಧ ಕ್ರಮ ಕೈಗೊಂಡು, ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಿದೆ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ರಾಜ್ಯ ಕಾರ್ಯದರ್ಶಿ ದಿವಾಕರ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ, ಮುಖಂಡ ಕರುಣಾಕರ ರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಅಭ್ಯರ್ಥಿ ಬಂಗಾರು ಹನುಮಂತು, ಪಕ್ಷದ ರಾಜ್ಯ- ಜಿಲ್ಲಾ ಪ್ರಮುಖರು ಇದ್ದರು.