ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 50:50 ಅನುಪಾತದಲ್ಲಿನ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರನ್ನು ಶುಕ್ರವಾರ ಮೈಸೂರಿನಲ್ಲಿ ವಿಚಾರಣೆ ನಡೆಸಿದ್ದಾರೆ.
ಮುಡಾ ನಿವೇಶನ ಹಂಚಿಕೆ ಸಂಬಂಧ ಸಿಎಂ ಸಿದ್ಧರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ, ಜಮೀನುದಾರ ದೇವರಾಜು ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದರು.
ಪ್ರಕರಣ ಎ2 ಆರೋಪಿ ಪಾರ್ವತಿ ಅವರು ಇಂದು(ಅ.25) ಬೆಳಿಗ್ಗೆ ಮುಡಾ ಕಚೇರಿಗೆ ಆಗಮಿಸಿದ ಅವರನ್ನು ಸತತ 3 ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಿದ ಅವರು, ಪೂರಕ ದಾಖಲೆಗಳ ಜೊತೆಗೆ ಹೇಳಿಕೆ ನೀಡಿ ವಾಪಾಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ಗೌಪ್ಯ ಸ್ಥಳದಲ್ಲಿ ಪಾರ್ವತಿ ಅವರನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಎ 4, ಎ3 ಆರೋಪಿಗಳು ಸೇರಿದಂತೆ ಹಲವರನ್ನು ಕಚೇರಿಗೆ ಕರೆಸಿ ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದ್ದಾರೆ.
ಖುದ್ದು ಹಾಜರಗುವಂತೆ ನಿನ್ನೆ(ಅ.24) ಸಂಜೆ ಸಿಎಂ ಪತ್ನಿ ಪಾರ್ವತಿ ಅವರಿಗೆ ಲೋಕಾಯುಕ್ತ ಎಸ್ಪಿ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನಲೆ ಖುದ್ದು ಎಸ್ಪಿ ಕಚೇರಿಗೆ ಪಾರ್ವತಿ ಅವರು ಆಗಮಿಸಿದ್ದರು ಎನ್ನಲಾಗಿದೆ.