ರಕ್ಷಣಾ ಕಾರ್ಯಾಚರಣೆಯ ವಿಡಿಯೊದ ಒಂದು ದೃಶ್ಯ: ಇನ್ಸುಲೇಟೆಡ್ ವೈಮಾನಿಕ ವೇದಿಕೆಯ ಬಳಿ ಕಪ್ಪು ಹದ್ದು.
ಬೆಂಗಳೂರು: ಬನ್ನೇರುಘಟ್ಟ ಬಳಿ ವಿದ್ಯುತ್ ಹರಿಯುತ್ತಿದ್ದ 400 ಕೆವಿ ಪ್ರಸರಣ ಮಾರ್ಗದಲ್ಲಿ ಸಿಲುಕಿದ್ದ ಕಪ್ಪು ಹದ್ದನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಎಂಜಿನಿಯರ್ಗಳು ಲೈನ್ ಸ್ಥಗಿತಗೊಳಿಸದೆ ರಕ್ಷಿಸಿದ್ದಾರೆ.
ಬಿಸಾಡಲಾಗಿದ್ದ ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿ ನೆಲದಿಂದ 90 ಅಡಿಗೂ ಹೆಚ್ಚು ಎತ್ತರದಲ್ಲಿ ಸುಮಾರು ಮೂರು ದಿನಗಳಿಂದ ಬಿಡಿಸಿಕೊಳ್ಳಲು ಪರದಾಡುತ್ತಿತ್ತು.
ಈ ಮಾರ್ಗ ಬೆಂಗಳೂರಿನ ಸುಮಾರು 10 ಪ್ರದೇಶಗಳಿಗೆ ವಿದ್ಯುತ್ ಪೂರೈಸುತ್ತದೆ. ಅದನ್ನು ಸ್ಥಗಿತಗೊಳಿಸಿದ್ದರೆ ಹಲವು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿತ್ತು. ಹೀಗಾಗಿ ವಿದ್ಯುತ್ ಹರಿಯುತ್ತಿರುವಾಗಲೇ ರಕ್ಷಿಸಲು ಅಧಿಕಾರಿಗಳು ನಿರ್ಧರಿಸಿದರು.
ವಿದ್ಯುತ್ ವಾಹಕದ ಬಳಿಗೆ ಸಿಬ್ಬಂದಿ ಸುರಕ್ಷಿತವಾಗಿ ತಲುಪಲು ನೆರವಾಗುವ, ಬ್ರೆಜಿಲ್ನಿಂದ ಆಮದು ಮಾಡಿಕೊಂಡ ವಿಶೇಷ ಇನ್ಸುಲೇಟೆಡ್ ವೈಮಾನಿಕ ವೇದಿಕೆಯನ್ನು ಕೆಪಿಟಿಸಿಎಲ್ ಬಳಸಿತು. ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) ನೂರ್ ಅಹ್ಮದ್ ಷರೀಫ್ ಅವರ ಮೇಲ್ವಿಚಾರಣೆಯಲ್ಲಿ ಪೀಣ್ಯ ಹಾಟ್ಲೈನ್ ವಿಭಾಗ ಕಾರ್ಯಾಚರಣೆ ನಡೆಸಿತು; ಮುಖ್ಯ ಎಂಜಿನಿಯರ್ ಕಾಂತಾಮಣಿ ಬೆಂಬಲ ನೀಡಿದರು. ನೆಲಮಟ್ಟದಲ್ಲಿ ವನ್ಯಜೀವಿ ರಕ್ಷಣಾ ಸಂಸ್ಥೆಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯ ನಡೆಸಿದರು.
ಗಾಯಗೊಂಡ ಪಕ್ಷಿಯನ್ನು ವನ್ಯಜೀವಿ ಪುನರ್ವಸತಿ ತಜ್ಞರಿಗೆ ಹಸ್ತಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು.
ವಿದ್ಯುತ್ ಪೂರೈಕೆಗೆ ಅಡ್ಡಿಯಾಗದಂತೆ 400 ಕೆವಿ ಲೈವ್ ವೈರ್ನಿಂದ ಜೀವ ಉಳಿಸಿರುವುದು ಅಸಾಧಾರಣ ತಾಂತ್ರಿಕ ಪರಿಣತಿ ಮತ್ತು ಕರುಣೆಯ ನಿದರ್ಶನ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಂಡವನ್ನು ಅಭಿನಂದಿಸಿದರು. ಹಾಟ್ಲೈನ್ ಸಿಬ್ಬಂದಿಯ ಧೈರ್ಯ ಮತ್ತು ನಿಖರತೆಯನ್ನು ಶ್ಲಾಘಿಸಿದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಜೀವ ರಕ್ಷಣೆಗೆ ಬಳಕೆಯಾದಾಗ ತಂತ್ರಜ್ಞಾನ ತನ್ನ ಅತ್ಯುನ್ನತ ಉದ್ದೇಶವನ್ನು ಸಾಧಿಸುತ್ತದೆ ಎಂದರು.
