ರೋಬೋಟಿಕ್ ತಂತ್ರಜ್ಞಾನದಿಂದ 399 ಕಡೆ ರಸ್ತೆ ಅಗೆಯುವುದನ್ನು ತಪ್ಪಿಸಿದ ಜಲಮಂಡಳಿ; ಬೆಂಗಳೂರು ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ
ಬೆಂಗಳೂರು: ಬೆಂಗಳೂರು ಜಲಮಂಡಳಿಯು (BWSSB) ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿ ಕಳೆದ ಆರು ತಿಂಗಳಲ್ಲಿ ನಗರದ 399 ಕಡೆ ರಸ್ತೆ ಅಗೆಯುವುದನ್ನು ತಪ್ಪಿಸುವ ಮೂಲಕ ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ದೊಡ್ಡ ಮಟ್ಟದ ಅನುಕೂಲ ಕಲ್ಪಿಸಿದೆ.
ಜಲಮಂಡಳಿಯ ಪ್ರಕಾರ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಆರಂಭಿಸಲಾದ ಈ ರೋಬೋಟಿಕ್ ತಂತ್ರಜ್ಞಾನವನ್ನು ಪೈಪ್ಲೈನ್ ಹಾಗೂ ಒಳಚರಂಡಿ ದೋಷ ಪತ್ತೆಗೆ ಪರಿಣಾಮಕಾರಿಯಾಗಿ ಬಳಸಲಾಗಿದೆ.
ಈ ತಂತ್ರಜ್ಞಾನದಿಂದ ರಸ್ತೆಯನ್ನು ಅಗೆಯದೆ ಪೈಪ್ಲೈನ್ ಒಳಗೆ ರೋಬೋಟ್ಗಳನ್ನು ಕಳುಹಿಸಿ ದೋಷಗಳನ್ನು ನಿಖರವಾಗಿ ಪತ್ತೆಹಚ್ಚಲಾಗಿದ್ದು, ಇದರಿಂದ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ಹಾಗೂ ಸಾರ್ವಜನಿಕರ ತೊಂದರೆ ಗಣನೀಯವಾಗಿ ಕಡಿಮೆಯಾಗಿದೆ.
32 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೋಬೋಟಿಕ್ ತಪಾಸಣೆ
ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರ ಪ್ರಕಾರ, ಕಳೆದ ಆರು ತಿಂಗಳಲ್ಲಿ ರೋಬೋಟ್ಗಳ ಮೂಲಕ ಸುಮಾರು 32,661 ಮೀಟರ್ (32.66 ಕಿಲೋಮೀಟರ್) ಉದ್ದದ ಪೈಪ್ಲೈನ್ ಮತ್ತು ಒಳಚರಂಡಿ ಮಾರ್ಗಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗಿದೆ.
ಈ ತಪಾಸಣೆ ವೇಳೆ ಒಟ್ಟು 394 ದೋಷಗಳನ್ನು ನಿಖರವಾಗಿ ಪತ್ತೆಹಚ್ಚಿ, ರಸ್ತೆಗಳಿಗೆ ಹೆಚ್ಚು ಹಾನಿಯಾಗದಂತೆ ಅವುಗಳನ್ನು ಸರಿಪಡಿಸಲಾಗಿದೆ.
399 ಕಡೆ ರಸ್ತೆ ಅಗೆಯುವುದು ತಪ್ಪಿತು
ರೋಬೋಟಿಕ್ ತಂತ್ರಜ್ಞಾನದ ನೆರವಿನಿಂದ ನಗರದ 399 ಸ್ಥಳಗಳಲ್ಲಿ ರಸ್ತೆ ಅಗೆಯುವುದನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಗಳೂರುಂತಹ ಮಹಾನಗರದಲ್ಲಿ ರಸ್ತೆ ಅಗೆಯುವುದು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಭಾರೀ ತೊಂದರೆ ಉಂಟುಮಾಡುತ್ತದೆ. ಹಿಂದೆ ಪೈಪ್ಲೈನ್ ಸೋರಿಕೆ ಅಥವಾ ಒಳಚರಂಡಿ ದೋಷ ಪತ್ತೆಹಚ್ಚಲು ರಸ್ತೆಗಳನ್ನು ಅಗೆಯಲೇಬೇಕಾಗುತ್ತಿತ್ತು. ಈಗ ರೋಬೋಟ್ಗಳು ಪೈಪ್ಲೈನ್ ಒಳಗೆ ಹೋಗಿ ನಿಖರವಾಗಿ ದೋಷ ಪತ್ತೆ ಮಾಡುತ್ತಿರುವುದರಿಂದ ರಸ್ತೆ ಹಾನಿ ಮತ್ತು ಟ್ರಾಫಿಕ್ ಸಮಸ್ಯೆ ಬಹಳಷ್ಟು ಕಡಿಮೆಯಾಗಿದೆ,” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಅವರು ಮುಂದುವರೆದು, ಸುಮಾರು 32 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಅಗೆಯುವ ಅವಶ್ಯಕತೆ ತಪ್ಪಿದ ಪರಿಣಾಮ ನಗರ ಸಂಚಾರಕ್ಕೆ ದೊಡ್ಡ ಮಟ್ಟದ ಪರಿಹಾರ ಸಿಕ್ಕಿದೆ ಎಂದರು.
404 ದೂರುಗಳಲ್ಲಿ 399 ಇತ್ಯರ್ಥ
ಜಲಮಂಡಳಿಯ ಮಾಹಿತಿ ಪ್ರಕಾರ, ಕಳೆದ ಆರು ತಿಂಗಳಲ್ಲಿ ಬಂದಿದ್ದ ಒಟ್ಟು 404 ದೂರುಗಳ ಪೈಕಿ 399 ದೂರುಗಳನ್ನು ಈಗಾಗಲೇ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಉಳಿದ ಐದು ದೂರುಗಳನ್ನು ಆದ್ಯತೆಯ ಮೇರೆಗೆ ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಜನಸ್ನೇಹಿ ತಂತ್ರಜ್ಞಾನಕ್ಕೆ ಆದ್ಯತೆ
ನಗರದ ಮೂಲಸೌಕರ್ಯ ಮತ್ತು ಸುಗಮ ಸಂಚಾರ ವ್ಯವಸ್ಥೆಗೆ ಯಾವುದೇ ತೊಂದರೆ ಆಗದಂತೆ ಉತ್ತಮ ಸೇವೆ ನೀಡುವುದು ಜಲಮಂಡಳಿಯ ಬದ್ಧತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲೂ ಇಂತಹ ಆಧುನಿಕ, ಜನಸ್ನೇಹಿ ಹಾಗೂ ಸ್ಮಾರ್ಟ್ ತಂತ್ರಜ್ಞಾನ ಬಳಕೆಯನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ ಎಂದು ಜಲಮಂಡಳಿ ಸ್ಪಷ್ಟಪಡಿಸಿದೆ.
