ಬೆಂಗಳೂರು: ನವೆಂಬರ್ 5ರ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಮೂರು ಸೇತುವೆಗಳ ಮರುನಿರ್ಮಾಣಕ್ಕೆ ಒಟ್ಟು ₹94 ಕೋಟಿ ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಿದೆ ಎಂದು ಸಂಪುಟ ತೀರ್ಮಾನಗಳ ಟಿಪ್ಪಣಿ ತಿಳಿಸಿದೆ.
ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಪುನರ್ನಿರ್ಮಾಣಕ್ಕೆ ₹42 ಕೋಟಿ ಮಂಜೂರಾಗಿದೆ. ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟಾಗ ಈ ಸೇತುವೆ ಹಲವು ದಿನ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತವಾಗುತ್ತದೆ ಮತ್ತು ಅಗಲ ಕಿರಿದಾಗಿರುವುದರಿಂದ ಸ್ಥಳೀಯರಿಗೆ ಅನನುಕೂಲವಾಗಿದೆ ಎಂದು ಟಿಪ್ಪಣಿ ಹೇಳಿದೆ. 210 ಮೀಟರ್ ಉದ್ದ, 19.61 ಮೀಟರ್ ಅಗಲದ ಆರ್ಸಿಸಿ ಡೆಕ್ ಸ್ಲ್ಯಾಬ್ ಸೇತುವೆ ನಿರ್ಮಿಸಲಾಗುವುದು.
ಶಿವಮೊಗ್ಗ ನಗರದ ಬಾಗಲಕೋಟೆ–ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿ 57ರಲ್ಲಿರುವ ಶಿಥಿಲಗೊಂಡ ಹಳೆಯ ತುಂಗಾ ಸೇತುವೆಯ ಮರುನಿರ್ಮಾಣಕ್ಕೆ ₹40 ಕೋಟಿ ಅನುಮೋದನೆ ನೀಡಲಾಗಿದೆ. ಹೊಸ ಸೇತುವೆ 292.03 ಮೀಟರ್ ಉದ್ದ, 12 ಮೀಟರ್ ಅಗಲ ಇರಲಿದೆ.
ಮೊಳಕಾಲ್ಮುರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 150ಎ ನಾಗಸಮುದ್ರ ಕ್ರಾಸ್ನಿಂದ ಹುಚ್ಚಂಗಿದುರ್ಗ ರಸ್ತೆ ವಯಾ ನಾಗಸಮುದ್ರ ರಸ್ತೆಯಲ್ಲಿರುವ ಜಿನಗಿಹಳ್ಳ ನದಿಯ ಸೇತುವೆ ಮರುನಿರ್ಮಾಣ ಮತ್ತು ಅಪ್ರೋಚ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ ಅಂದಾಜು ಪಟ್ಟಿಗೆ ಅನುಮೋದನೆ ದೊರೆತಿದೆ.
