Home ರಾಜಕೀಯ “ಜಾತಿ ಹೋಗಬೇಕು ಅಂತಾರೆ, ಆದರೆ ಸಿಂಧಗಿಯಲ್ಲಿ ಜಾತಿಗೊಂದು ಸಮಾವೇಶ ಮಾಡ್ತಾರೆ” ಸಿದ್ದರಾಮಯ್ಯ ಮೇಲೆ ಹೆಚ್‌ಡಿಕೆ ತೀವ್ರ...

“ಜಾತಿ ಹೋಗಬೇಕು ಅಂತಾರೆ, ಆದರೆ ಸಿಂಧಗಿಯಲ್ಲಿ ಜಾತಿಗೊಂದು ಸಮಾವೇಶ ಮಾಡ್ತಾರೆ” ಸಿದ್ದರಾಮಯ್ಯ ಮೇಲೆ ಹೆಚ್‌ಡಿಕೆ ತೀವ್ರ ವಾಗ್ದಾಳಿ

20
0
bengaluru

ನಾನೂ ಕುರಿ ಸಾಕುತ್ತೇನೆ, ಬಿಡದಿ ತೋಟಕ್ಕೆ ಬಂದು ನೋಡಲಿ

ನಾನು ನೇಗಿಲೂ ಹಿಡಿದಿದ್ದೇನೆ, ಕೂಲಿಯನ್ನೂ ಮಾಡಿದ್ದೇನೆ, ತಲೆ ಮೇಲೆ ಗೊಬ್ಬರವನ್ನೂ ಹೊತ್ತಿದ್ದೇನೆ

ಮೈಸೂರು:

ಜೆಡಿಎಸ್ ಅನ್ನು ಜಾತಿ ಪಕ್ಷ ಎಂದು ಅಪಪ್ರಚಾರ ಮಾಡುವ ಸಿದ್ದರಾಮಯ್ಯ ಅವರು ಸಿಂಧಗಿಯಲ್ಲಿ ಕೂತು ಜಾತಿಗೊಂದು ಸಮಾವೇಶ ಮಾಡುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಮೈಸೂರಿನಲ್ಲಿಂದ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

“ನಿನ್ನೆಯ ದಿನ ಸಿದ್ದರಾಮಯ್ಯ ಅವರು ಕುರುಬರಿಗೊಂದು ಪ್ರತ್ಯೇಕ ಸಮಾವೇಶ, ತಳವಾರ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ, ಕೋಳಿ ಸಮಾಜಕ್ಕೊಂದು ಪ್ರತ್ಯೇಕ ಸಮಾವೇಶ ಮಾಡಿದ್ದಾರೆ. ಇದು ಯಾವ ಸೀಮೆಯ ಜಾತ್ಯಾತೀತತೆ? ಬಾಯಲ್ಲಿ ಮಾತ್ರ ಜಾತ್ಯತೀತ, ಒಳಗೆಲ್ಲ ಬರೀ ಜಾತಿ. ನಮ್ಮ ರಾಜ್ಯದಲ್ಲಿ ಜಾತಿ-ಜಾತಿಗಳ ನಡವೆ ಕಂದಕ ಸೃಷ್ಟಿ ಮಾಡುತ್ತಿರುವುದೇ ಇದೇ ಸಿದ್ದರಾಮಯ್ಯ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

bengaluru

ತಾವು ಗಾಜಿನ ಮನೆಯಲ್ಲಿ ಕೂತು ಇನ್ನೊಬ್ಬರ ಮನೆಯ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಬೇರೆಯವರಿಗೆ ಉಪದೇಶ ಮಾಡುವ ಮುನ್ನ ಅವರು ತಮ್ಮ ನಡವಳಿಕೆಯ ಬಗ್ಗೆ ಜನರಿಗೆ ಸ್ಪಷ್ಟವಾಗಿ ಹೇಳಬೇಕು. ಒಂದು ಕಡೆ ಜಾತಿ ಹೋಗಬೇಕು ಅಂತೀರಿ? ಹಾಗಾದರೆ, ಜಾತಿ ಸಮಾವೇಶಗಳನ್ನು ಯಾಕೆ ಮಾಡುತ್ತೀರಿ? ಚುನಾವಣೆಯಲ್ಲಿ ಮತ ಪಡೆಯುವುದಕ್ಕಷ್ಟೇ ಸಿದ್ದರಾಮಯ್ಯ ಅವರ ಜಾತಿ ರಾಜಕೀಯ ಎಂದು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.

ನಾನೂ ಕುರಿ ಸಾಕುತ್ತೇನೆ, ಬಂದು ನೋಡಲಿ:

ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಾವ ಕುರಿ ಕಾಯ್ದವರೇ ಎಂದು ಲಘುವಾಗಿ ಮಾತನಾಡಿದ್ದಾರೆ ಸಿದ್ದರಾಮಯ್ಯ. ಇವರೊಬ್ಬರೇನಾ ಕುರಿ ಕಾಯ್ದವರು? ಚಿಕ್ಕ ಮಕ್ಕಳಿದ್ದಾಗ ನಾವು ಕುರಿ ಮಂದೆಯಲ್ಲೇ ಊಟ ಮಾಡಿ ಅಲ್ಲೇ ಮಲಗ್ತಿದ್ದೆವು. ನಾವು ಕೂಡ ಕುರಿ ಸಾಕಿದ್ದೇವೆ, ಈಗಲೂ ಸಾಕುತ್ತಿದ್ದೇವೆ. ಬೇಕಾದರೆ ಬಿಡದಿ ತೋಟಕ್ಕೆ ಬಂದು ನೋಡಲಿ. ಕುರಿ ಸಾಕಣೆ ಮಾಡಿದವರು ಸಿದ್ದರಾಮಯ್ಯ ಒಬ್ಬರೇ ಅಲ್ಲ ಎಂದು ಪ್ರತಿಪಕ್ಷ ನಾಯಕನಿಗೆ ಹೆಚ್‌ಡಿಕೆ ಟಾಂಗ್ ಕೊಟ್ಟರು.

ಮೊನ್ನೆ ಹಾನಗಲ್ʼನಲ್ಲಿ ಭಾಷಣ ಮಾಡುತ್ತಿದ್ದರು ಇದೇ ಮಹಾನುಭಾವರು. ಕುಮಾರಸ್ವಾಮಿ ನೇಗಿಲು ಹಿಡಿದವ್ನಾ? ಕೃಷಿ ಮಾಡವ್ನಾ? ಕೂಲಿ ಮಾಡವ್ನಾ? ಅವನಿಗೇನು ಗೊತ್ತು ಕೃಷಿ? ಎಂದು ಕೇವಲವಾಗಿ ಮಾತನಾಡಿದ್ದಾರೆ. ನಾನು ಯಾವ ರೀತಿ ಕೃಷಿ ಮಾಡುತ್ತಿದ್ದೇನೆ ಎನ್ನುವುದನ್ನು ಅವರು ನನ್ನ ತೋಟಕ್ಕೇ ಬಂದು ನೋಡಲಿ. ಸಿದ್ದರಾಮಯ್ಯ ಏನ್ಮಾಡಿದ್ದಾರೆ? ಅವರದ್ದು ತೋಟ ಇರಬೇಕಲ್ಲಾ? ಏನೇನು ಮಾಡಿದ್ದಾರೋ ಹೇಳಲಿ. ನಾವು ಕೂಲಿಯನ್ನೂ ಮಾಡಿದ್ದೇವೆ, ನೇಗಿಲನ್ನೂ ಹಿಡಿದಿದ್ದೇವೆ, ತಲೆಯ ಮೇಲೆ ಗೊಬ್ಬರವನ್ನೂ ಹೊತ್ತಿದ್ದೇವೆ. ಇವರೊಬ್ಬರೇ ಅಲ್ಲ ಎಂದು ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ತಳಮಳ ಉಂಟಾಗಿದೆ:

ಈಗ ಜೆಡಿಎಸ್ ಪಕ್ಷದ ಓಟ ವೇಗವಾಗಿದೆ. ಜನರಿಗೆ ಹತ್ತಿರವಾಗುತ್ತಿದೆ, ಹೀಗಾಗಿ ಅವರಲ್ಲಿ ತಳಮಳ ಉಂಟಾಗಿದೆ. ಆದ್ದರಿಂದಲೇ ಇಷ್ಟು ದೊಡ್ಡ ಮಟ್ಟದ ದಾಳಿಗಳು ನಮ್ಮ ಪಕ್ಷದ ಮೇಲಾಗುತ್ತಿವೆ. ವೈಯಕ್ತಿಕವಾಗಿಯೂ ಟೀಕೆ ಮಾಡುತ್ತಿದ್ದಾರೆ. ಕಾರ್ಯಕ್ರಮಗಳ ಮೇಲೆ ಅಥವಾ ನಮ್ಮ ವೈಫಲ್ಯಗಳನ್ನು ಎತ್ತಿತೋರಿಸಿ ದಾಳಿ ನಡೆಸುತ್ತಿಲ್ಲ, ಬದಲಿಗೆ ನಮ್ಮ ವ್ಯಕ್ತಿಗತ ವಿಚಾರಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರು ಎಷ್ಟು ಟೀಕೆ ಮಾಡಿದರೂ ನಾವು ಅಷ್ಟೇ ಗಟ್ಟಿಯಾಗುತ್ತೇವೆ. ಅವರು ಇನ್ನೂ ಹೆಚ್ಚೆಚ್ಚು ಟೀಕೆ ಮಾಡಲಿ, ಅದೇ ನಮಗೆ ಆಶೀರ್ವಾದ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇಂದು ಪುನಾ ಸಿಂಧಗಿಗೆ:

ಗುಬ್ಬಿಯಲ್ಲಿ ನಮ್ಮ ಪಕ್ಷದ ಒಂದು ಕಾರ್ಯಕ್ರಮವಿದೆ. ಅದನ್ನು ಮುಗಿಸಿಕೊಂಡು ಪುನಾ ಇಂದು ನಾನು ಸಿಂಧಗಿಗೆ ತೆರಳುತ್ತಿದ್ದೇನೆ ಎಂದ ಕುಮಾರಸ್ವಾಮಿ ಅವರು; ಮತ್ತೆ ಎರಡು ದಿನ ನಾನು ಅಲ್ಲಿಯೇ ಇರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗುಬ್ಬಿ ವಾಸು ಮತ್ತು ಕಾಂತರಾಜು ಅವರಿಬ್ಬರೂ ಕುಮಾರಸ್ವಾಮಿ ಅವರೇ ನಮ್ಮನ್ನು ಪಕ್ಷದಿಂದ ಹೊರದಬ್ಬುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು; “ನಾನು ಯಾರನ್ನೂ ಪಕ್ಷದಿಂದ ಹೊರಗೆ ಕಳಿಸುತ್ತಿಲ್ಲ. ಹೋಗಿ ಎಂದು ಯಾರಿಗೂ ಹೇಳಿಯೂ ಇಲ್ಲ. ಇವತ್ತು ಕೆಲ ಕಾರ್ಯಕರ್ತರು ಪಕ್ಷಕ್ಕೆ ಸೇರುತ್ತೇವೆ ಎಂದು ಮುಂದೆ ಬಂದ ಕಾರಣಕ್ಕೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಾನು ಗುಬ್ಬಿಗೆ ಹೋಗುತ್ತಿದ್ದೇನೆ. ಪಕ್ಷಕ್ಕೆ ಸೇರುತ್ತಿರುವ ಕಾರ್ಯಕರ್ತರು ಸ್ವತಃ ಶಾಸಕರ ಮನೆಗೇ ಹೋಗಿ ನಿಮ್ಮ ಅಧ್ಯಕ್ಷತೆಯಲ್ಲೇ ಸೇರ್ಪಡೆ ಆಗುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿ ಯಾರನ್ನು ಹೊರಗೆ ಕಳಿಸುವ ಉದ್ದೇಶವಿಲ್ಲ.” ಎಂದರು.

ಕಳೆದ ಮೂರು ವರ್ಷಗಳಿಂದ ಅವರು ಪಕ್ಷದೊಳಗೇ ಇದ್ದುಕೊಂಡು ಪಕ್ಷದ ಬಗ್ಗೆ ಹಾಗೂ ನಾಯಕರ ಬಗ್ಗೆ ಯಾವೆಲ್ಲ ಹೇಳಿಕೆಗಳನ್ನು ನೀಡಿದ್ದಾರೆನ್ನುವುದನ್ನು ಆ ಇಬ್ಬರು ಮುಖಂಡರು ಒಮ್ಮೆ ನೆನಪು ಮಾಡಿಕೊಳ್ಳಲಿ. ವೈಯಕ್ತಿಕವಾಗಿ ನನ್ನ ಬಗ್ಗೆಯೇ ಹೇಳಿಕೆಗಳನ್ನು ನೀಡಿದ್ದರು, ಅದರ ಅಗತ್ಯ ಇತ್ತಾ? ಬಿಡದಿಯಲ್ಲಿ ನಡೆದ ಕಾರ್ಯಾಗಾರಕ್ಕೆ ಬರುವಂತೆ ಸ್ವತಃ ನಾನೇ ಕರೆದಿದ್ದೇನೆ. ಸಮಸ್ಯೆ ಇದ್ದರೆ ಮುಕ್ತವಾಗಿ ಚರ್ಚೆ ಮಾಡೋಣ ಎಂದು ಹೇಳಿದ್ದೇನೆ. ಅವರೇ ತಮಗೆ ಬೇಕಾದ ಹಾಗೆ ಹೇಳಿಕೆಗಳನ್ನು ನೀಡಿದರೆ ಹೇಗೆ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯನ್ನು ಹುಡುಕುತ್ತಿದ್ದೀರಾ? ಎನ್ನುವ ಪ್ರಶ್ನೆಗೆ; “ನಮ್ಮ ಪಕ್ಷವು 2023ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದೆ. ಬಿಡದಿಯಲ್ಲಿ ಕಾರ್ಯಾಗಾರವನ್ನು ಹುಡುಗಾಟಕ್ಕೆ ಮಾಡಿದ್ದಲ್ಲ. ಚುನಾವಣೆಗೆ 17 ತಿಂಗಳ ಮೊದಲೇ ಪಕ್ಷದ ಸಂಘಟನೆಗೆ ಚಾಲನೆ ನೀಡಿದ್ದೇವೆ. ನವೆಂಬರ್ 1ರಿಂದ ಪುನಾ ಜನತಾ ಸಂಗಮ ಎನ್ನುವ ಕಾರ್ಯಕ್ರಮ ಆರಂಭವಾಗುತ್ತಿದೆ. ಅದಕ್ಕೆ ಅಗತ್ಯವಾದ ಪೂರ್ವ ಸಿದ್ಧತೆ ನಡೆಯುತ್ತಿದೆ. ಕೇವಲ ಚಾಮುಂಡೇಶ್ವರಿ ಅಥವಾ ಶಿರಾ ಕ್ಷೇತ್ರಗಳ ಪ್ರಶ್ನೆ ಅಲ್ಲ, ನಾವು ಗುರಿ ಹಾಕಿಕೊಂಡಿರುವಂತೆ 123 ಕ್ಷೇತ್ರಗಳನ್ನು ಗೆಲ್ಲಲು ಏನು ಬೇಕೋ ಅದೆಲ್ಲವನ್ನೂ ಮಾಡುತ್ತೇವೆ” ಎಂದು ಅವರು ತಿಳಿಸಿದರು.

ದೇವೇಗೌಡರು, ಕುಮಾರಸ್ವಾಮಿ ಅವರು ಸಿಂಧಗಿಯಲ್ಲಿ ಬೀಡುಬಿಟ್ಟಿರುವುದೇ ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿಕ್ಕೆ ಎಂದು ಸಿದ್ದರಾಮಯ್ಯ ಮತ್ತು ಅವರ ಆಪ್ತರು ಆರೋಪ ಮಾಡಿದ್ದಾರೆ. ಹಾಗಾದರೆ, ಜೆಡಿಎಸ್ ಪಕ್ಷವನ್ನು ಸೋಲಿಸಲು ಅವರೂ ಕೂಡ ಸಿಂಧಗಿಯಲ್ಲೇ ಬೀಡುಬಿಟ್ಟಿದ್ದಾರೆಂದು ನಾನೂ ಹೇಳಬಹುದಲ್ಲ ಎಂದ ಅವರು. ಕಾಂಗ್ರೆಸ್ ಪಕ್ಷವೆಂದೂ ಸಹ ಸಿಂದಗಿಯಲ್ಲಿ ಎರಡನೇ ಸ್ಥಾನಕ್ಕೇ ಬಂದಿಲ್ಲ ಎಂದು ಚಾಟಿ ಬೀಸಿದರು

bengaluru

LEAVE A REPLY

Please enter your comment!
Please enter your name here