ಮಳೆ ನೀರು ಕಾಲುವೆ ಕಾಮಗಾರಿಗಳಿಗೆ ಮೊದಲ ಆದ್ಯತೆ: ಪೂರ್ವ ಪಾಲಿಕೆಯಲ್ಲಿ ಆಯುಕ್ತ ಡಿ.ಎಸ್. ರಮೇಶ್ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು, ಮೇ 5: ಮುಂಗಾರು ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ನೀರು ನಿಲುವು ಸಮಸ್ಯೆಯನ್ನು ತಡೆಗಟ್ಟಲು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ವಿಶ್ವಬ್ಯಾಂಕ್ ನೆರವಿನಿಂದ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆ (SWD) ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಹಾಗೂ ಪ್ರಥಮ ಆದ್ಯತೆಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಮತ್ತು ನವೀಕರಣ ಕಾಮಗಾರಿಗಳ ಪ್ರಗತಿ ಪರಿಶೀಲನೆ, ಕಾಲುವೆಗಳ ಗಡಿ ಗುರುತಿಸುವಿಕೆ, ಒತ್ತುವರಿ ತೆರವು ಹಾಗೂ ಮುಂಗಾರು ಪೂರ್ವ ಸಿದ್ಧತೆ ಕ್ರಮಗಳನ್ನು ಸಮನ್ವಯದಿಂದ ಜಾರಿಗೊಳಿಸುವ ಅಗತ್ಯವನ್ನು ಆಯುಕ್ತರು ಒತ್ತಿ ಹೇಳಿದರು.
ವಿಶ್ವಬ್ಯಾಂಕ್ ಅನುದಾನದಡಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಮಾತನಾಡಿದ ಅವರು, ಕಾಲುವೆಗಳ ಸ್ಪಷ್ಟ ಗಡಿ ಗುರುತಿಸುವಿಕೆ, ಒತ್ತುವರಿ ತೆರವು ಮತ್ತು ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಅನುಷ್ಠಾನ ಅತ್ಯಂತ ಮುಖ್ಯವಾಗಿದ್ದು, ಇದರಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ಸಭೆಯಲ್ಲಿ ನೀಡಲಾದ ನಿರ್ದೇಶನಗಳ ಪ್ರಕಾರ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಕಾಲುವೆ ಅಭಿವೃದ್ಧಿ, ನಿರ್ವಹಣೆ ಹಾಗೂ ಕಾಮಗಾರಿಗಳ ಮೇಲ್ವಿಚಾರಣೆ ಮತ್ತು ಜವಾಬ್ದಾರಿ ಯೋಜನಾ ಅನುಷ್ಠಾನ ಘಟಕ (PIU) ಅಧಿಕಾರಿಗಳ ಮೇಲಿದೆ ಎಂದು ಸ್ಪಷ್ಟಪಡಿಸಲಾಯಿತು. ಈ ಘಟಕವು ಎಲ್ಲಾ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚಿಸಲಾಯಿತು.
ಕಾಲುವೆಗಳ ಗಡಿ ಗುರುತಿಸುವಿಕೆ ಮತ್ತು ಒತ್ತುವರಿ ತೆರವು ಕಾರ್ಯಾಚರಣೆಗಾಗಿ ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಯೋಜನಾ ಅನುಷ್ಠಾನ ಘಟಕವು ಸಂಪೂರ್ಣ ಹೊಣೆ ಹೊತ್ತು ಕಾರ್ಯನಿರ್ವಹಿಸಬೇಕು ಎಂದು ಆಯುಕ್ತರು ಸೂಚಿಸಿದರು.
ಮುಂಗಾರು ಮಳೆಯ ಹಿನ್ನೆಲೆ ಗಮನದಲ್ಲಿಟ್ಟುಕೊಂಡು, ತುರ್ತು ಹಾಗೂ ಆದ್ಯತೆಯ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ಪ್ರತೀ ಮಳೆಗಾಲದಲ್ಲೂ ಎದುರಾಗುವ ನೀರು ನಿಲುವು ಸಮಸ್ಯೆಗಳನ್ನು ತಡೆಗಟ್ಟಲು, ಮಳೆ ನೀರು ಕಾಲುವೆ ಕಾಮಗಾರಿಗಳನ್ನು ವೇಗವಾಗಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವುದು ಅತ್ಯಗತ್ಯವಾಗಿದ್ದು, ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ತಿಳಿಸಿದರು.
ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಸ್ನೇಹಲ್ ಸುಧಾಕರ್ ಲೋಖಂಡೆ, ಮುಖ್ಯ ಅಭಿಯಂತರ ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಯೋಜನಾ ಅನುಷ್ಠಾನ ಘಟಕದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
