ಒಳಮೀಸಲಾತಿ ಜಾರಿಗೆ ಹಿನ್ನೆಲೆ: ಮೇ 9–10 ನೇಮಕಾತಿ ಪರೀಕ್ಷೆ ರದ್ದು
ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ, ಮೇ 9 ಮತ್ತು 10ರಂದು ನಡೆಸಬೇಕಿದ್ದ ವಿವಿಧ ನೇಮಕಾತಿ ಲಿಖಿತ ಪರೀಕ್ಷೆಗಳು ರದ್ದುಗೊಂಡಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಆರ್ಜಿಯುಎಚ್ಎಸ್, ಬೆಂಗಳೂರು ಜಲಮಂಡಳಿ, ಕೃಷಿ ಮಾರಾಟ ಇಲಾಖೆ ಹಾಗೂ ಕೆಎಸ್ಎಸ್ಐಡಿಸಿ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಹೊಸದಾಗಿ ಒಳಮೀಸಲಾತಿ ಅನ್ವಯಿಸಿ ಅಧಿಸೂಚನೆ ಹೊರಡಿಸಲು ಸಚಿವ ಸಂಪುಟ ಏಪ್ರಿಲ್ 4ರಂದು ತೀರ್ಮಾನಿಸಿದ ಕಾರಣದಿಂದ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಒಳಮೀಸಲಾತಿ ನೀತಿಗೆ ಅನುಗುಣವಾಗಿ ಮರುಪ್ರಾರಂಭಿಸಲು ಹೊಸ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ಹುದ್ದೆಗಳ ಪರೀಕ್ಷೆ ಮುಂದುವರಿಕೆ
ಆದರೆ, ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಮತ್ತು ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗಳ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆ ಮುಂದುವರಿಯಲಿದೆ.
ಈ ಹುದ್ದೆಗಳಿಗಾಗಿ ಈಗಾಗಲೇ ಏಪ್ರಿಲ್ 26 ಮತ್ತು 27ರಂದು ಪತ್ರಿಕೆ-2 (ವಿಷಯಾಧಾರಿತ ಪರೀಕ್ಷೆ) ನಡೆಸಲಾಗಿದೆ. ಇಂತಹ ಅಭ್ಯರ್ಥಿಗಳಿಗೆ ಮೇ 9 ಮತ್ತು 10ರಂದು ಸಾಮಾನ್ಯ ಜ್ಞಾನ (ಪತ್ರಿಕೆ-1) ಪರೀಕ್ಷೆ ನಡೆಯಲಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಕೆಇಎ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
