Home ರಾಜಕೀಯ ಕಾಂಗ್ರೆಸ್ ನಾಯಕರು ಜನರನ್ನು ಲೂಟಿ ಮಾಡುತ್ತಾರೆ, ನಾನು ಜನರನ್ನು ಪೂಜಿಸುತ್ತೇನೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್ ನಾಯಕರು ಜನರನ್ನು ಲೂಟಿ ಮಾಡುತ್ತಾರೆ, ನಾನು ಜನರನ್ನು ಪೂಜಿಸುತ್ತೇನೆ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

8
0

ಎನ್ ಡಿಎ ಬೃಹತ್ ಸಮಾವೇಶದಲ್ಲಿ ಕೇಂದ್ರ ಸಚಿವರ ಗುಡುಗು

ಚನ್ನಪಟ್ಟಣ / ರಾಮನಗರ: ಈ ದೇಶದ ಚುನಾವಣೆ ವ್ಯವಸ್ಥೆ ಬಗ್ಗೆ ನಾನು ವಿಧಾನಮಂಡಲದಲ್ಲಿ ಮಾತನಾಡಿದ್ದ ಆಡಿಯೋವನ್ನೇ ತಿರುಚಿ, ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಜನರನ್ನೂ ಲೂಟಿ ಮಾಡಿಲ್ಲ, ಜನರನ್ನೇ ಪೂಜೆ ಮಾಡುತ್ತೇನೆ. ನಾನು ಕಾಂಗ್ರೆಸ್ ನೋಡಿ ಕಲಿಯುವುದು ಏನು ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.

ಚನ್ನಪಟ್ಟಣದಲ್ಲಿ ನಡೆದ ಎನ್ ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪ್ರಚಾರದ ಬೃಹತ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೈತರ ಸಾಲಮನ್ನಾ ಮಾಡಿದ ನೆಮ್ಮದಿ ಬಿಟ್ಟರೆ, ಕಾಂಗ್ರೆಸ್‌ನೊಂದಿಗಿನ ನಮ್ಮ ಸರಕಾರ ರಚನೆಯಷ್ಟು ಮಾನಸಿಕ ಹಿಂಸೆ ಮತ್ಯಾವುದು ಇರಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಳ ನೋವು ವ್ಯಕ್ತಪಡಿಸಿದರು.

ಬಿಜೆಪಿ ಜೆಡಿಎಸ್ ಮೈತ್ರಿ ಹಾಲು ಜೇನಿನಂತೆ ಬೆರೆತು ಹೋಗಿದ್ದು, ಅದನ್ನು ಸಹಿಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ನಾಡಿನ ಜನರ ಬದುಕನ್ನು ಸರಿಪಡಿಸುವ ನಿಟ್ಟಿನಲ್ಲಿ ಎನ್‌ಡಿಎ ಮೈತ್ರಿಕೂಟ ಪ್ರಾಣಿಕವಾಗಿ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.

ನಿಖಿಲ್ ವಿರುದ್ಧ ಕಾಂಗ್ರೆಸ್ ಕುತಂತ್ರ

ನಿಖಿಲ್ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಇಡೀ ಸರ್ಕಾರ ಷಡ್ಯಂತ್ರ ರೂಪಿಸಿದೆ. ಆದರೆ, ದುರಾಲೋಚನೆ, ಕೆಟ್ಟ ಪ್ರ ಫಲಕಾರಿ ಆಗುವುದಿಲ್ಲ ಎಂಬುದನ್ನು ಎಂದ ಅವರು; ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡಲು ಕಾಂಗ್ರೆಸ್ ಸಂಚು ರೂಪಿಸುತ್ತಲೇ ಇದೆ. ಅವರ ಕನಸು ಎಂದಿಗೂ ಈಡೇರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜತೆ ಸರ್ಕಾರ ಮಾಡಿದ್ದು ಸುವರ್ಣ ಕಾಲ. ಅಂದು ಬಿಜೆಪಿ ನಮಗೆ ಆಸರೆಯಾಗಿತ್ತು. 20 ತಿಂಗಳ ಆಡಳಿತದಲ್ಲಿ ಜನಪರ ಕೆಲಸಗಳನ್ನು ಯಡಿಯೂರಪ್ಪ ಅವರ ಸಹಕಾರದಿಂದ ಮಾಡಿದೆ. ಇವತ್ತು ನನಗೆ ರಾಜಕೀಯವಾಗಿ ಹೆಸರು ಬಂದಿದೆ ಎಂದರೆ ಅದಕ್ಕೆ ಯಡಿಯೂರಪ್ಪ ಪಾಲು ಇದೆ ಎಂದು ಕೇಂದ್ರ ಸಚಿವರು ಹೇಳಿದರು.

ಅಂದಿನ ಸುವರ್ಣಯುಗದಲ್ಲೇ ರಾಮನಗರದಲ್ಲಿ ಬೃಹತ್ ಸರ್ಕಾರಿ ಕಟ್ಟಡಗಳು ತಲೆ ಎತ್ತಿವೆ. ಲಾಟರಿ, ಸರಾಯಿ ನಿಷೇದ ಆಗಿದೆ. ಸುವರ್ಣ ಗ್ರಾಮೋದ್ಯೋಗ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಸೈಕಲ್ ವಿತರಣೆಯಂತಹ ಕಾರ‌್ಯಕ್ರಮಗಳನ್ನು ಮಾಡಿದ್ದೆವೆ ಎಂದರು ಅವರು.

ಕಾಂಗ್ರೆಸ್ ನಾಶ ಆಗುತ್ತಿತ್ತು

ಅಂದು ಬಿಎಸ್‌ವೈಗೆ ಅಧಿಕಾರ ಹಸ್ತಾಂತರ ಮಾಡಲು ನಾನು ಪ್ರಾಮಾಣಿಕವಾಗಿ ತೀರ್ಮಾನ ಮಾಡಿದ್ದೆ. ಆದರೆ, ಅದನ್ನು ತಪ್ಪಿಸಲು ನಡೆದ ಘಟನೆಗಳನ್ನು ನಾನು ಬಹಿರಂಗ ಪಡಿಸುವುದಿಲ್ಲ. ಆದರೆ, ಕೆಲವರು ಮಾಡಿದ ಕೃತ್ಯದಿಂದ ನಾನು ಹದಿನಾಲ್ಕು ವರ್ಷಗಳ ಕಾಲ ವನವಾಸ ಅನುಭವಿಸಿದೆ ಎಂದು ಅವರು ಭಾವುಕರಾದರು.

ಅಂದು ಸಿಎಂ ಬಿಎಸ್‌ವೈ ಅವರಿಗೆ ಅಧಿಕಾರ ನೀಡಿದ್ದಿದ್ದರೆ ಅಂದೇ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ವನಾಶ ಆಗುತ್ತಿತು. ಆದರೆ, ವಿಧಿ ಆಟದ ಮುಂದೆ ನಮ್ಮದೇನು ನಡೆಯಲಿಲ್ಲ ಎಂದು ವಿಷಾಡಿಸಿದ ಸಚಿವರು, ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಸರಕಾರ ಒಟ್ಟಾಗಿ ಮತ್ತೊಮ್ಮೆ ಸುವರ್ಣ ಕಾಲ ಸರಕಾರವನ್ನು ಸ್ಥಾಪಿಸುತ್ತೆವೆ ಎಂದು ಘೋಷಣೆ ಮಾಡಿದರು.

ಕುಮಾರಸ್ವಾಮಿ ಏನು ಮಾಡಿದ್ದಾರೆ. ಸಾಕ್ಷಿ ಗುಡ್ಡೆ ತೋರಿಸಲಿ ಎಂದು ಕಾಂಗ್ರೆಸ್ ನಾಯಕರು ಕೇಳುತ್ತಿದ್ದಾರೆ. ಇಡೀ ಕ್ಷೇತ್ರವನ್ನು ಸುತ್ತು ಹಾಕಿದರೆ ನಾನು ಮಾಡಿರುವ ಕೆಲಸಗಳು ಏನು ಎಂದು ಗೊತ್ತಾಗುತ್ತದೆ. ಚನ್ನಪಟ್ಟಣದ ಪ್ರಥಮ ದರ್ಜೆ ಕಾಲೇಜುಗಳೇ ನಮ್ಮ ಸಾಕ್ಷಿಗುಡ್ಡೆ. ಅದನ್ನು ಬಿಟ್ಟು ಮತ್ತಿಕೆರೆ ಬಳಿ ರೈಲಿನ ಮೂಲಕ ಹೋಗುತ್ತಿರುವ ಕಲ್ಲು ಬಂಡೆಗಳೇ ಡಿಕೆ ಸಹೋದರರ ಸಾಕ್ಷಿಗುಡ್ಡೆಗಳು. ಅಕ್ಕೂರು ಹೊಸಳ್ಳಿಯಲ್ಲಿ ವೈದ್ಯರನ್ನು ನೇಮಿಸಲು ಕಾಂಗ್ರೆಸ್‌ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ದಶಾವರಕ್ಕೆ ನೀಡಿರುವ ₹20 ಕೋಟಿ ಅನುದಾನದ ಕಾಮಗಾರಿಯನ್ನು ನಾನೇ ಬಿಡುಗಡೆ ಮಾಡಿದ್ದೆ. ಆದರೆ, ಇನ್ನು ಕಾಮಗಾರಿ ಪೂರ್ಣಗೊಳಿಸಲು ಕಾಂಗ್ರೆಸ್‌ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಅವರು ಕಿಡಿಕಾರಿದರು.

ಒಳಚರಂಡಿಗಳ ಕಾಮಗಾರಿಗಳಿಗೆ ಅನುದಾನ ಕೊಡಿಯದ್ದು ನಾನು. ಆದರೆ, ಈವರೆಗೂ ಬಿಡುಗಡೆಯಾಗಿರುವ ಹಣಕ್ಕೆ ಕಾಮಗಾರಿ ಶುರು ಮಾಡಲಿಲ್ಲ. ರಾಮನಗರ-ಚನ್ನಪಟ್ಟಣಕ್ಕೆ ದಿನದ 24 ಗಂಟೆಯು ಕುಡಿಯುವ ನೀರು ನೀಡಲು ಮೊದಲು ಹಣ ಬಿಡುಗಡೆ ಮಾಡಿದವರು ದೇವೇಗೌಡರು. ನಾನು ಈವರೆಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದೆನೆಯೇ? ಎಂದು ಕೇಂದ್ರ ಸಚಿವರು ಕಾಂಗ್ರೆಸ್‌ಗೆ ಪ್ರಶ್ನಿಸಿದರು.

ನಮ್ಮ ಕಾರ‌್ಯಕರ್ತರನ್ನು ಜೈಲಿಗೆ ಕಳುಹಿಸುವುದು. ಹಾಲಿನ ಡೇರಿಗಳಲ್ಲಿಯು ರಾಜಕೀಯ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ನಾಲ್ಕೈದು ಊರಿಗೆ ಬಿಟ್ಟು ಇನ್ನುಳಿದ ಎಲ್ಲ ಊರಿಗೂ ಸಿಮೆಂಟ್ ರಸ್ತೆ ಹಾಕಿಸಿದ್ದೆವೆ. ಹೈ ಮಾಸ್ಕ್ ಲೈಟ್ ಹಾಕಿಸಿದ್ದೆನೆ. ಇದು ನಮ ಸಾಕ್ಷಿ ಗುಡ್ಡೆಘಿ. ಕಳೆದ ೧೭ ತಿಂಗಳಿನಿಂದ ಕಾಂಗ್ರೆಸ್ ಏನು ಮಾಡಿದೆ?
-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

ನಡ್ಡಾ ಅವರ ಸಂದೇಶ ಕೇಳಿಸಿದ ಸಚಿವರು

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನಿಖಿಲ್ ಅವರನ್ನು ಗೆಲ್ಲಿಸಬೇಕು ಎಂದು ಚನ್ನಪಟ್ಟಣ ಮತದಾರರಿಗೆ ಮಾಡಿರುವ ಮನವಿ ಆದೇಶವನ್ನು ಇದೇ ವೇಳೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಜನತೆಗೆ ಕೇಳಿಸಿದರು.

ಕಾಂಗ್ರೆಸ್‌ನ ಭ್ರಷ್ಟಚಾರ ತಡೆಗಟ್ಟಲು ನಿಖಿಲ್‌ ಕುಮಾರಸ್ವಾಮಿಗೆ ಮತದಾನ ಮಾಡಿ. ಬಿಜೆಪಿಯ ಎಲ್ಲ ಕಾರ‌್ಯಕರ್ತರು ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಬೇಕು ಎನ್ನುವ ಸಾಲುಗಳು ಆಡಿಯೋದಲ್ಲಿ ಇದೆ. ನಮ್ಮ ಮೈತ್ರಿಯ ಶಕ್ತಿಯನ್ನು, ಬಿಜೆಪಿ ನಾಯಕರ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ವಿ.ಸೋಮಣ್ಣ, ಪ್ರತಿಪಕ್ಷ ನಾಯಕ ಅಶೋಕ್, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ ನಾರಾಯಣ, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಡಾ.ಕೆ.ಸಿ.ನಾರಾಯಣ ಗೌಡ, ಸಾ ರಾ ಮಹೇಶ್,ಎನ್ ಮಹೇಶ್, ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ.ಕುಮಾರಸ್ವಾಮಿ, ಶಾಸಕರಾದ ಕರೆಮ್ಮ ನಾಯಕ್, ರಾಮನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಆರ್ ರವಿಕುಮಾರ್, ಭೋಜೆಗೌಡ, ಮಾಜಿ ಶಾಸಕರಾದ ಹೆಚ್.ಎಂ.ರಮೇಶ್ ಗೌಡ, ನಿಸರ್ಗ ನಾರಾಯಣಸ್ವಾಮಿ, ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಜಯಮುತ್ತು ಸೇರಿದಂತೆ ಅನೇಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here