ಚನ್ನಪಟ್ಟಣ: ನ. 11: “ಕುಮಾರಸ್ವಾಮಿ ಅವರೇ ಚನ್ನಪಟ್ಟಣ ಚುನಾವಣೆಯಲ್ಲಿ ನಿಮ್ಮ ಯಾವ ಹಣ ಬಲವೂ ನಡೆಯುವುದಿಲ್ಲ. ಸ್ಟೀಲ್, ಗಣಿ ಯಾವ ದುಡ್ಡು ತಂದಿದ್ದರೂ ಜನರ ಮುಂದೆ ನಡೆಯುವುದಿಲ್ಲ. ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳು ಕೈ ಹಿಡಿಯಲಿವೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಮಳೂರಿನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ.ಯೋಗೇಶ್ವರ್ ಪರವಾಗಿ ಮತ ಯಾಚಿಸಿದ ಶಿವಕುಮಾರ್ ಅವರು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
“ಕುಮಾರಸ್ವಾಮಿ ಅವರೇ ನಿಮ್ಮ ಬಳಿ ಹಣ ತೆಗೆದುಕೊಳ್ಳುತ್ತಾರೆ. ಮತವನ್ನು ಯೋಗೇಶ್ವರ್ ಗೆ ಹಾಕುತ್ತಾರೆ. ಕುಮಾರಸ್ವಾಮಿ ನೋಟು, ಯೋಗೇಶ್ವರ್ ಗೆ ಓಟು. ಚನ್ನಪಟ್ಟಣದಲ್ಲಿ ಅಭಿವೃದ್ಧಿಯ ಗಾಳಿ ಬೀಸಬೇಕು. ಅದಕ್ಕಾಗಿ ಸರ್ಕಾರದ ಎಲ್ಲಾ ಮಂತ್ರಿಗಳು ಇಲ್ಲಿಗೆ ಬಂದಿದ್ದೇವೆ. ಯೋಗೇಶ್ವರ್ ಗೆ ಬೆಂಬಲ ನೀಡಿ ಚನ್ನಪಟ್ಟಣದ ಅಭಿವೃದ್ಧಿ ಮಾಡುತ್ತೇವೆ” ಎಂದರು.
ಅಧಿಕಾರ ನಶ್ವರ, ಮತದಾರ ಈಶ್ವರ
“ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ. ಹೀಗಾಗಿ ನಾವು ನಿಮ್ಮ ಮುಂದೆ ಕೈಮುಗಿದು ನಿಂತಿದ್ದೇವೆ. ನೀವು ಅಭಿವೃದ್ಧಿಗಾಗಿ ಮತ ಹಾಕಬೇಕು ಎಂದು ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ” ಎಂದರು.
ಕುಮಾರಸ್ವಾಮಿ ಜಮೀನಿಗೆ ದುಪ್ಪಟ್ಟು ಹಣ ನೀಡುವೆ
“ಕುಮಾರಣ್ಣ ಬಿಡದಿ ಮತ್ತು ಕೇತಗಾನಹಳ್ಳಿಯಲ್ಲಿ ಇರುವ ಜಮೀನುಗಳನ್ನು ಕೊಟ್ಟರೆ ನಾನೇ ಅದಕ್ಕೆ ದುಪ್ಪಟ್ಟು ಹಣ ಕೊಡುವೆ. ಅಲ್ಲಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿ. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಕ್ಕಳು ಶಾಲೆಗಳ ಸ್ಥಾಪನೆ ಮಾಡಲು 25 ಎಕರೆ ಜಮೀನನ್ನು ದಾನ ಮಾಡಿದ್ದಾರೆ. ನೀವು ಒಬ್ಬರಿಗೂ ಸಹಾಯ ಮಾಡಿಲ್ಲ” ಎಂದು ವ್ಯಂಗ್ಯವಾಡಿದರು.
“ಯೋಗೇಶ್ವರ್ 4-5 ಕೋಟಿ ವೆಚ್ಚದಲ್ಲಿ ಮಹದೇಶ್ವರ ಕೋಡಂಬಳ್ಳಿಯಲ್ಲಿ ಬಿಸಿಲಮ್ಮ ದೇವಸ್ಥಾನ ಕಟ್ಟಿಸಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಇಂತಹ ಒಂದೇ ಒಂದು ದೇವಸ್ಥಾನವನ್ನು ನಿಮ್ಮ ಕೈಯಲ್ಲಿ ನಿರ್ಮಾಣವಾಗಲು ಸಾಧ್ಯವಾಗಲಿಲ್ಲ” ಎಂದರು.
“ಕಳೆದ ಬಾರಿ ರಾಮನಗರದಲ್ಲಿ ಏಕೆ ನಿಮ್ಮ ಮಗನನ್ನು ಜನರು ಗೆಲ್ಲಿಸಲಿಲ್ಲ. ನೀವು ನಿಮ್ಮ ಧರ್ಮಪತ್ನಿ, ತಂದೆ ಎಲ್ಲರೂ ಅಧಿಕಾರವನ್ನು ಅನುಭವಿಸಿದವರು. ರಾಮನಗರಕ್ಕೆ ಯಾವುದೇ ಕೆಲಸ ಮಾಡಿದ ಕಾರಣಕ್ಕೆ ನಿಖಿಲ್ ಅನ್ನು ಸೋಲಿಸಿ, ನಿಮಗೆ ಪಾಠ ಕಲಿಸಿದರು. ಯೋಗೇಶ್ವರ ಮಾಡಿದ ತಪ್ಪಿನಿಂದಾಗಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರೇ ನೀವು ಗೆದ್ದಿದ್ದೀರಿ” ಎಂದರು.
“ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬರದೇ ಇದ್ದಿದ್ದರೆ ನಾನು ಚನ್ನಪಟ್ಟಣದಿಂದ ಸ್ಪರ್ಧಿಸುತಿದ್ದೆ. ಕೊನೆ ಗಳಿಗೆಯಲ್ಲಿ ಯೋಗೇಶ್ವರ್ ಅವರು ನಮ್ಮ ಬಳಿ ಬಂದು ತಪ್ಪಾಯ್ತು ಎಂದು ಕೇಳಿಕೊಂಡರು. ತಕ್ಷಣವೇ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿಯವರ ಬಳಿ ಮಾತನಾಡಿ ಟಿಕೆಟ್ ಘೋಷಣೆ ಮಾಡಿ ಬಿ ಫಾರ್ಮ್ ಕೊಡಲಾಯಿತು. ಕಾರ್ಯಕರ್ತರ ಬಳಿ ಚರ್ಚೆ ಮಾಡಲು ಸಮಯ ಸಿಗಲಿಲ್ಲ ಅದಕ್ಕಾಗಿ ಕ್ಷಮೆ ಇರಲಿ” ಎಂದರು.
“ಚನ್ನಪಟ್ಟಣದಲ್ಲಿ ಶಾಸಕ ಸ್ಥಾನ ಖಾಲಿಯಾದ ಮರುದಿನದಿಂದಲೇ ಇಲ್ಲಿಗೆ ₹500 ಕೋಟಿ ತೆಗೆದುಕೊಂಡು ಬಂದೆ. ಪ್ರಸ್ತುತ ಚನ್ನಪಟ್ಟಣದ ಎಲ್ಲಾ ಪಂಚಾಯಿತಿ ಮಟ್ಟದಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನಿವೇಶನ ಮತ್ತು ಮನೆಗಳಿಗಾಗಿ 300 ಎಕರೆ ಜಮೀನನ್ನು ಕ್ಷೇತ್ರದಲ್ಲಿ ಗುರುತಿಸಲಾಯಿತು. ಸಚಿವ ಜಮೀರ್ ಅಹಮದ್ ಖಾನ್ ರವರು 5 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹಾರಿಸಲು ಬರಲಿಲ್ಲ. ಕನ್ನಡ ಧ್ವಜ ಹಾರಿಸಲು ಬರಲಿಲ್ಲ” ಎಂದರು.
ಕಣ್ಣೀರು ಹಾಕಿ ಸುಳ್ಳು ಹೇಳುತ್ತಾರೆ
“ಕಣ್ಣೀರು ಹಾಕುತ್ತಾ ಬರಿ ಸುಳ್ಳನ್ನು ಹೇಳುತ್ತಿದ್ದಾರೆ. ನಾವುಗಳು ಕಣ್ಣೀರಿಗೆ ಹೆದರುವ ಮಕ್ಕಳಲ್ಲ. ಸಾತನೂರು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದ ನಾನು ಲೂಟಿ ಮಾಡಿದ್ದೀನೆಯೇ? ಬಂಡೆಯನ್ನು ಹೊಡೆದು ಹಾಕಿದ್ದೇನೆಯೇ? ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಜನ ನನ್ನ 8ನೇ ಬಾರಿಗೆ 1.23 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿಯವರೇ ನೀವು ಮುಖ್ಯಮಂತ್ರಿಗಳಾಗಿದ್ದಾಗ ಒಂದೇ ಒಂದು ಬಸ್ ನಿಲ್ದಾಣವನ್ನು ಮಾಡಲು ನಿಮ್ಮ ಕೈಯಲ್ಲಿ ಆಗಲಿಲ್ಲ” ಎಂದು ಹೇಳಿದರು.
“ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯ ತನಕ ಕಾಂಗ್ರೆಸ್ ಸರ್ಕಾರಗಳು ಕೊಟ್ಟಿದೆ. ಇಂತಹ ಒಂದೇ ಒಂದು ಜನಪರ ಯೋಜನೆಗಳನ್ನು ಕುಮಾರಸ್ವಾಮಿ ಅವರೇ ನೀವು ಜಾರಿಗೆ ತಂದಿದ್ದೀರಾ? ನೀವು ಹಾಗೂ ನಿಮ್ಮ ತಂದೆ ದೇವೇಗೌಡರು ನನ್ನ ಬಗ್ಗೆ ಎಷ್ಟು ಬೇಕಾದರೂ ಟೀಕೆ ಮಾಡಿ ಆದರೆ, ನೀವು ಮಾಡಿದ ಒಂದೇ ಒಂದು ಜನಪರ ಯೋಜನೆಗಳ ಬಗ್ಗೆ ಉದಾಹರಣೆ ಕೊಡಿ. ಡಿ.ಕೆ. ಸುರೇಶ್ ಅವರು ಕರೋನ ಸಮಯದಲ್ಲಿ ಔಷಧಿ ಮತ್ತು ತರಕಾರಿಗಳನ್ನು ಮನೆಮನೆಗೆ ಹಂಚಿದರು. ನೀವೇನು ಮಾಡಿದ್ದೀರಿ? ಒಂದು ಸಣ್ಣ ಕಾರ್ಯಕ್ರಮ ಮಾಡದ ನಿನಗೆ ಏಕೆ ಬೇಕು ಅಧಿಕಾರ, ಎಂಎಲ್ ಎ ಗಿರಿ. ಈಗ ಕಾರ್ಖಾನೆ ಮಾಡುತ್ತೇನೆ ಎಂದು ಹೇಳುತ್ತಾ ಇದ್ದಾರೆ” ಎಂದು ಲೇವಡಿ ಮಾಡಿದರು.
“ಶಾಸಕರಾದವರ ಕೆಲಸ ಏನು? ಅಭಿವೃದ್ಧಿ ಮಾಡುವುದು. ಅಭಿವೃದ್ಧಿ ಮಾಡದೇ ಇರುವುದು ಕುಮಾರಸ್ವಾಮಿ ಅವರ ಕೆಲಸ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನಾವು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಯಾವ ಅವಕಾಶವನ್ನು ಜೆಡಿಎಸ್ ಅವರು ಉಪಯೋಗಿಸಿ ಕೊಂಡಿಲ್ಲ” ಎಂದು ಹೇಳಿದರು.
“ನಾನು ದೇವೇಗೌಡರು, ಕುಮಾರಸ್ವಾಮಿ ಅವರನ್ನು ಬೈಯಲು, ಅವರ ವಿಚಾರ ಮಾಡಲು ನನಗೆ ಇಷ್ಟವಿಲ್ಲ. ಆದರೆ ಕೆಲವು ವಿಚಾರದ ಬಗ್ಗೆ ನಿಮ್ಮ ಮುಂದೆ ಚರ್ಚೆ ಮಾಡುತ್ತೇನೆ. ಯೋಗೇಶ್ವರ್ ಅವರು 2 ಬಾರಿ ಸೋತಿರುವ ಬೇಸರ ವ್ಯಕ್ತಪಡಿಸಿದರು. ಅವರ ಈ ಸೋಲಿಗೆ ಸ್ವತಃ ಅವರೇ ಕಾರಣವೇ ಹೊರತು ನೀವಲ್ಲ. ನಾನು ಯೋಗೇಶ್ವರ್ ಅವರಿಗೆ ಗಿಣಿಗೆ ಹೇಳಿದಂತೆ ಹೇಳಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಹೇಳಿದೆ” ಎಂದರು.
ಯೋಗೇಶ್ವರ್ ಸೋಲಿಗೆ ಅವರೇ ಕಾರಣ
“ಯೋಗೇಶ್ವರ್ ಎರಡು ಬಾರಿ ಸೋಲಿಗೆ ಅವರೇ ಕಾರಣ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ, ಅಧಿಕಾರದಲ್ಲಿದ್ದರೆ ಚೆಂದ ಎಂದು ಗಿಣಿಗೆ ಹೇಳಿದಂತೆ ಹೇಳಿದೆ. ನನ್ನ ಮಾತು ಕೇಳದೇ ಯೋಗೇಶ್ವರ್ ಅವರು ಬಿಜೆಪಿ ಸೇರಿದಾಗ, ಅನಿವಾರ್ಯವಾಗಿ ನಾವು ಹೆಚ್.ಎಂ ರೇವಣ್ಣ ಅವರನ್ನು ಕಣಕ್ಕಿಳಿಸಿದ್ದೆವು. ರೇವಣ್ಣ ನಿಲ್ಲದಿದ್ದರೆ ಯೋಗೇಶ್ವರ್ ಗೆಲ್ಲುತ್ತಿದ್ದರು” ಎಂದರು.
ಯೋಗೇಶ್ವರ್ ಕಾಂಗ್ರೆಸ್ ಬಿಟ್ಟು ಹೋಗುವಂತಿಲ್ಲ
“ಯೋಗೇಶ್ವರ್ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಅವತ್ತೂ ಗೆಲ್ಲುತ್ತಿದ್ದ, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲೂ ಯೋಗೇಶ್ವರ್ ಅವರಿಗೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ನಮ್ಮ ಉದಯ್ ಅವರು ಹೇಳಿದರು. ಆದರೂ ಕಮಲವನ್ನೇ ನೆಚ್ಚಿಕೂತರು. ಮೊನ್ನೆ ನಾಗವಾರದಲ್ಲಿ ಹೆಣ್ಣು ಮಗಳೊಬ್ಬಳು ಯೋಗೇಶ್ವರ್ ಅವರಿಗೆ ಇನ್ನು ಮುಂದೆ ನೀವು ಯಾವತ್ತೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುವಂತಿಲ್ಲ ಎಂದು ಪಾಠ ಹೇಳಿದರು” ಎಂದರು.
“ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಅಧಿಕಾರ ಅವಧಿಯಲ್ಲಿ ಸಾಕ್ಷಿಗುಡ್ಡೆ ಏನು? ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಉಳುವವನೇ ಭೂಮಿಯ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ, ಪಿಂಚಣಿ ವ್ಯವಸ್ಥೆ ಸೇರಿದಂತೆ ಅನೇಕ ಕಾರ್ಯಕ್ರಮ ಕೊಟ್ಟರು. ದೇವರಾಜ ಅರಸು, ಬಂಗಾರಪ್ಪ, ಗೂಂಡುರಾವ್, ಸಿದ್ದರಾಮಯ್ಯ, ವೀರೇಂದ್ರ ಪಾಟೀಲ್, ದೇವರಾಜ ಅರಸು, ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಮುಂದೆ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಉಳುವವನೆ ಭೂಮಿಯ ಒಡೆಯ, ಬಗರ್ ಹುಕುಂ, ಆಶ್ರಯ, ಆರಾಧನಾ, ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್, ಸ್ತ್ರೀ ಶಕ್ತಿ, ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರಭಾಗ್ಯ, ಅಕ್ಷರ ದಾಸೋಹ ಸೇರಿದಂತೆ ಹತ್ತು ಹಲವು ಯೋಜನೆ ಜಾರಿಗೆ ತರಲಾಗಿದೆ” ಎಂದರು.
“ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆಮೂಲಕ ಜನ ಸಾಮಾನ್ಯರ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಿ ಬದಲಾವಣೆ ತರಲಾಗಿದೆ.ಕನಕಪುರದಲ್ಲಿ 1,500 ಕೋಟಿ ವೆಚ್ಚದಲ್ಲಿ ಹಾಲು ಸಂಸ್ಕರಣ ಕೇಂದ್ರ ಸ್ಥಾಪಿಸಿದ ಕಾರಣಕ್ಕೆ 1,100 ಜನರು ಕೆಲಸ ಮಾಡುತ್ತಾ ಇದ್ದಾರೆ” ಎಂದರು.
ಶಿವಕುಮಾರ್ ಬಗ್ಗುವ ಮಗ ಅಲ್ಲ
“ನೂರಾರು ನಾಯಕರನ್ನು ಮುಳುಗಿಸಿದರು ಎಂದು ಸುರೇಶ್ ಅವರು ಹೇಳಿದರು. ಇಂತಹ ನೂರಾರು ಜನ ಬಂದರೂ ಅದನ್ನು ತಡೆದುಕೊಳ್ಳುವ ಶಕ್ತಿ ನನಗಿದೆ. ಬಿಜೆಪಿಯವರ ಕಾಲದಲ್ಲಿ ಜೈಲನ್ನು ನೋಡಿದ್ದೇನೆ. ನಿನ್ನಿಂದಾಗಿ ಏನೇನು ಅನುಭವಿಸಬೇಕೋ ಅದನ್ನು ಅನುಭವಿಸಿದ್ದೇನೆ. ಅದಕ್ಕೆಲ್ಲಾ ಈ ಬಂಡೆ ಡಿ. ಕೆ. ಶಿವಕುಮಾರ್ ಬಗ್ಗುವ ಮಗ ಅಲ್ಲ” ಎಂದರು.