ಬೆಂಗಳೂರು:
ವಿಧಾನಸಭೆಯಲ್ಲಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದಾರೆ. ಅವರನ್ನು ಸ್ಪೀಕರ್ ಕಾಗೇರಿ ಸಸ್ಪೆಂಡ್ ಮಾಡಿದ್ದು, ಸ್ಪೀಕರ್ ಕ್ರಮಕ್ಕೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಒಂದು ದೇಶ ಒಂದು ಚುನಾವಣೆ ಚರ್ಚೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ಮಾಡುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಪೂರ್ತಿ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಕೆಂಡಾಮಂಡಲರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸದನದಲ್ಲಿ ಈ ರೀತಿ ನಡೆದುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ನೀವು ಕ್ಷೇತ್ರದ ಜನರಿಗೆ ಅಗೌರವ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಸದನದಲ್ಲಿ ಶರ್ಟ್ ಬಿಚ್ಚಿದ ಬಿಕೆ ಸಂಗಮೇಶ್‌ಗೆ ಸ್ಪೀಕರ್ ಕಾಗೇರಿ 1 ವಾರ ಅಮಾನತು ಶಿಕ್ಷೆ ನೀಡಿದ್ಧಾರೆ. ತಮ್ಮನ್ನು ಅಮಾನತು ಮಾಡಿದ ಸ್ಪೀಕರ್, ಬಿಜೆಪಿ ಸರ್ಕಾರದ ಏಜೆಂಟ್ ಎಂದು ಬಿಕೆ ಸಂಗಮೇಶ್ ಆರೋಪ ಮಾಡಿದ್ಧಾರೆ.
ಶಾಸಕ ಸಂಗಮೇಶ್ ಅವರನ್ನು ಅಮಾನತು ಮಾಡಿದ ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ಧಾರೆ. ವಿಧಾನಸಭೆಯಲ್ಲಿ ಒನ್ ನೇಷನ್ ಒನ್ ಎಲೆಕ್ಷನ್ ಕುರಿತ ಚರ್ಚೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ವಿರೋಧ ನಾಚಿಕೆಗೇಡಿನ ಸಂಗತಿ ಎಂದು ಸಿಎಂ ಯಡಿಯೂರಪ್ಪ ಕಿಡಿಕಾರಿದ್ಧಾರೆ.
ಒಂದು ರಾಷ್ಟ್ರ ಒಂದು ಚುನಾವಣೆಗೆ ಕಾಂಗ್ರೆಸ್ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದೆ. ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಸದನದಲ್ಲಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಬಟ್ಟೆ ಬಿಚ್ಚಿ ಆಕ್ರೋಶ ವ್ಯಕ್ಯಪಡಿಸಿದ್ದಾರೆ.