• ಜಿಲ್ಲೆಯಲ್ಲಿ 84 ಸಾವಿರ ಪ್ರಕರಣಗಳು ಬಾಕಿ ಆಗದೇ ಇತ್ಯರ್ಥ- ದಿನೇಶ್ ಆತಂಕ
• ಮಂಜೂರಾಗಿರುವ ಕೋರ್ಟ್ ಕಟ್ಟಡಗಳಿಗೆ ಸರ್ಕಾರ ಸ್ಥಳ ಮಂಜೂರು ಮಾಡುವಂತೆ ಮನವಿ
• ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠ- ದಿನೇಶ್ ಗೂಳಿಗೌಡ
ಮಂಡ್ಯ (ಶ್ರೀರಂಗಪಟ್ಟಣ):
ಮಂಡ್ಯ ಜಿಲ್ಲೆಯ ನ್ಯಾಯಾಲಯಗಳಲ್ಲಿ ಸುಮಾರು 84 ಸಾವಿರ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಮಂಡ್ಯದಲ್ಲಿ 15 ಕೋರ್ಟ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಇನ್ನೂ 8 ಕೋರ್ಟ್‌ಗಳು ಮಂಜೂರಾಗಿದೆ. ಆದರೆ, ಹೊಸ ಕಟ್ಟಡಕ್ಕೆ ಜಾಗದ ಕೊರತೆ ಇದ್ದು, ಕೂಡಲೇ ರಾಜ್ಯ ಸರ್ಕಾರ ಸ್ಥಳವನ್ನು ಮಂಜೂರು ಮಾಡಬೇಕು ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದರು.
ಶ್ರೀರಂಗಪಟ್ಟಣ ತಾಲೂಕು ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇವೆ. ಶ್ರೀರಂಗಪಟ್ಟಣ ತಾಲೂಕು ಒಂದರಲ್ಲೇ ಹತ್ತು ಸಾವಿರ ಪ್ರಕರಣಗಳು ಬಾಕಿ ಇವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿಯಲಿವೆ. ಈ ಸಮಸ್ಯೆಗಳು ನಿವಾರಣೆಯಾಗಬೇಕು ಎಂದಾದರೆ ಮೊದಲು ಮಂಜೂರಾಗಿರುವ ಕೋರ್ಟ್ ಕಟ್ಟಡಗಳು ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಈಗಾಗಲೇ ಮಂಡ್ಯ ಜಿಲ್ಲೆಗೆ 8 ಕೋರ್ಟ್‌ಗಳು ಮಂಜೂರಾಗಿದ್ದರೂ ಜಾಗದ ಕೊರತೆಯಿಂದ ಪ್ರಸ್ತಾಪ ಮುಂದಕ್ಕೆ ಹೋಗಿಲ್ಲ. ಹೀಗಾಗಿ ಸರ್ಕಾರದ ಮಟ್ಟದಲ್ಲಿರುವ ಕಡತಕ್ಕೆ ಜೀವತುಂಬುವ ಮೂಲಕ ರಾಜ್ಯ ಸರ್ಕಾರವು ಸ್ಥಳವನ್ನು ಮಂಜೂರು ಮಾಡಬೇಕಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಸರ್ಕಾರದ ಮೇಲೆ ಒತ್ತಡವನ್ನು ಹೇರಬೇಕು. ಶೀಘ್ರದಲ್ಲಿ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ದ್ವೀಪನಗರಿಯಲ್ಲಿ ಗ್ರಂಥಾಲಯ ಉದ್ಘಾಟಿಸಿರುವುದು ಸಂತಸ ನೀಡಿದೆ: ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ರೀತು ರಾಜ್ ಅವಸ್ಥಿ
ಭಾರತದ ಪ್ರಜಾಪ್ರಭುತ್ವ ಮಾದರಿಯಲ್ಲಿ ನ್ಯಾಯಾಂಗ ವ್ಯವಸ್ಥೆ ಬಹಳ ಮುಖ್ಯಪಾತ್ರವನ್ನು ವಹಿಸಿದೆ. ನ್ಯಾಯಾಂಗವು ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿದ್ದು, ಇದರ ಮೌಲ್ಯವನ್ನು ಘನತೆವೆತ್ತ ನ್ಯಾಯಾಲಯಗಳು ಉಳಿಸುತ್ತಿವೆ. ಹಲವಾರು ಐತಿಹಾಸಿಕ ತೀರ್ಪುಗಳು ನ್ಯಾಯಾಲಯಗಳಿಂದ ಹೊರಹೊಮ್ಮಿದೆ. ಶಾಸಕಾಂಗ ಎಡವಿದಾಗ ನ್ಯಾಯಾಂಗವು ಮಧ್ಯಪ್ರವೇಶಿಸುವ ಮೂಲಕ ತನ್ನ ಛಾಟಿಯನ್ನು ಬೀಸಿ ಸರಿದಾರಿಗೆ ತರುವ ಕೆಲಸಗಳೂ ಆಗಿವೆ. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯು ಅಷ್ಟರಮಟ್ಟಿಗೆ ಬಲಿಷ್ಠವಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯಲ್ಲಿ ನ್ಯಾಯವಾದಿಗಳು ಹೆಚ್ಚಿನ ಅಭ್ಯಾಸಗಳನ್ನು ಮಾಡುವ ಮೂಲಕ ತಾಲೂಕು ನ್ಯಾಯಾಧೀಶರು, ಜಿಲ್ಲಾ ನ್ಯಾಯಾಧೀಶರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ನಿಮ್ಮ ಅಧ್ಯಯನಗಳು ಹಾಗೂ ಪ್ರಯತ್ನಗಳು ಸಾಗಲಿ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ವಕೀಲರ ಬಳಿ ಮನವಿ ಮಾಡಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ಥಿ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳಾದ ಇ.ಎಸ್. ಇಂದ್ರೇಶ್ ಅವರು, ಹೈಕೋರ್ಟ್ ನ್ಯಾಯಮೂರ್ತಿಗಳಾದ ಸಿದ್ದಯ್ಯ ರಾಚಯ್ಯ ಅವರು, ಹೈಕೋರ್ಟ್ ರಿಜಿಸ್ಟರ್ ಜನರಲ್ ಟಿ.ಜಿ. ಶಿವಶಂಕರೇಗೌಡ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು, ಸಂಸದರಾದ ಸುಮಲತಾ ಅಂಬರೀಷ್ ಅವರು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.