ಧಾರವಾಡ/ಬೆಂಗಳೂರು:
ಮನೆ ಬಾಗಿಲಿಗೆ ನಗರಪಾಲಿಕೆ ಪರಿಕಲ್ಪನೆಯಡಿ ಚುನಾವಣೆ ಸ್ಪರ್ಧಿಸಲಿದ್ದೇವೆ. ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಧಾರವಾಡದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಭಿವೃದ್ಧಿ ಕಾರ್ಯಗಳಿಂದ ಜನಾಭಿಪ್ರಾಯ ನಮ್ಮ ಪರವಾಗಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರವನ್ನು ಮಾದರಿ ನಗರವಾಗಿ ಪರಿವರ್ತಿಸಲು ಜನರು ನಮಗೆ ಮತ ನೀಡಲಿದ್ದಾರೆ. ಪಾಲಿಕೆ ಸದಸ್ಯರು ಜನಸೇವಕರಾಗಿ ಕಾರ್ಯ ನಿರ್ವಹಿಸಬೇಕೆಂಬ ಚಿಂತನೆಯೊಂದಿಗೆ ಬಿಜೆಪಿ ಕೆಲಸ ಮಾಡಲಿದೆ. ನಿರಂತರ ಜನಸ್ಪಂದನದ ಕೆಲಸ ಪಾಲಿಕೆ ಸದಸ್ಯರಾಗಬೇಕು ಎಂದರು. ವಿಚಾರ, ಸಿದ್ಧಾಂತ, ನಿಷ್ಠೆ, ಜನಸ್ಪಂದನ ಹಾಗೂ ಸೇವಾ ಕಾರ್ಯ ಪರಿಗಣಿಸಿ ಈ ಬಾರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಬೆಳಗಾವಿ, ಕಲಬುರ್ಗಿ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಲ್ಲಿ ಸೆಪ್ಟೆಂಬರ್ 3ರಂದು ಚುನಾವಣೆ ನಡೆಯಲಿದೆ. ಇದಕ್ಕಾಗಿ ಮನೆ ಮನೆ ಭೇಟಿ, ಪ್ರಚಾರ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಳೆದ 10 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಬೆಳಗಾವಿ ಪಾಲಿಕೆಯಲ್ಲಿ ಕಳೆದ 25 ವರ್ಷಗಳಿಂದ ಚಿಹ್ನೆಯ ಆಧಾರದಲ್ಲಿ ಚುನಾವಣೆ ನಡೆದಿರಲಿಲ್ಲ. ಈ ಬಾರಿ ಪಕ್ಷಗಳ ಚಿಹ್ನೆಯ ಆಧಾರದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಕಲಬುರ್ಗಿಯಲ್ಲಿ ಯಾವತ್ತೂ ಬಿಜೆಪಿ ಆಡಳಿತ ಮಾಡಿಲ್ಲ. ನಾನು 3 ಕಡೆ ಪ್ರವಾಸ ಮಾಡಿದ್ದು, ವಾತಾವರಣ ನಮ್ಮ ಪರವಾಗಿದೆ. ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ- ಧಾರವಾಡದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ ಎಂದು ನುಡಿದರು.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು.
— BJP Karnataka (@BJP4Karnataka) August 31, 2021
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ @MTenginkai, ಶಾಸಕ ಶ್ರೀ @amrutdesaibjp, ಜಿಲ್ಲಾಧ್ಯಕ್ಷರು ಮತ್ತು ಪ್ರಮುಖರು ಉಪಸ್ಥಿತರಿದ್ದರು.#BJP4HDMC pic.twitter.com/GIijz7EmPe
ನಮ್ಮ ಸರಕಾರ ಬಂದ ಬಳಿಕ ಹುಬ್ಬಳ್ಳಿ- ಧಾರವಾಡಕ್ಕೆ ಕೇಂದ್ರದ ಅತಿ ಹೆಚ್ಚು ಅನುದಾನ ಲಭಿಸಿದೆ. ಸ್ಮಾರ್ಟ್ ಸಿಟಿ, ಅಮೃತ ಯೋಜನೆ ಅನುಷ್ಠಾನಗೊಳ್ಳುತ್ತಿವೆ. ರಾಜ್ಯ ಸರಕಾರದ ನಗರೋತ್ಥಾನದಡಿ 2 ಸಾವಿರ ಕೋಟಿಯ ಕಾಮಗಾರಿಗೆ ಟೆಂಡರ್ ಆಗಿದೆ. ನೀರು ಮನೆಗೆ ಟ್ಯಾಪ್ ಮೂಲಕ ಬರುವ ಮಾದರಿಯಲ್ಲೇ ಮನೆಗೆ ಗ್ಯಾಸ್ ಒದಗಿಸುವ ಕಾರ್ಯವೂ ಅನುಷ್ಠಾನಗೊಳ್ಳುತ್ತಿದೆ ಎಂದು ವಿವರಿಸಿದರು.
ಯುಜಿಡಿ ಲೈನ್ ಸರಿಪಡಿಸುವಿಕೆ, ಐಐಟಿ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ರಸ್ತೆ ಸೇರಿ ವಿವಿಧ ಯೋಜನೆಗಳಡಿ ಅತಿ ಹೆಚ್ಚು ಅನುದಾನ ಬಂದಿದೆ. ಕೇಂದ್ರದ ಹಿರಿಯ ಸಚಿವರಾದ ಶ್ರೀ ಪ್ರಲ್ಹಾದ್ ಜೋಷಿ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು. ಸ್ಥಳೀಯ ಶಾಸಕರ ಮಾರ್ಗದರ್ಶನದಲ್ಲಿ ರಾಜ್ಯ ಸರಕಾರದ ಅನುದಾನವೂ ಅತಿ ಹೆಚ್ಚು ಇಲ್ಲಿಗೆ ಸಿಕ್ಕಿದೆ ಎಂದರು.
ಬಂಡಾಯ ಅಭ್ಯರ್ಥಿಗಳನ್ನು ಪಕ್ಷ ಈಗಾಗಲೇ ಉಚ್ಚಾಟಿಸಿದೆ. ಶ್ರೀ ಜಗದೀಶ ಶೆಟ್ಟರ್ ಮತ್ತು ಶ್ರೀ ಪ್ರಲ್ಹಾದ್ ಜೋಷಿ ಅವರ ಮಾರ್ಗದರ್ಶನದಡಿ ಹುಬ್ಬಳ್ಳಿ- ಧಾರವಾಡದಲ್ಲಿ ಅತ್ಯುತ್ತಮ ಆಡಳಿತ ನೀಡಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರೆಲ್ಲರೂ ಪಂಜರದ ಗಿಣಿಗಳೇ. ಅವರ ಪಂಜರವನ್ನು ಕಾಯಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇದ್ದಾರೆ ಎಂದ ಅವರು, ಶ್ರೀ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾದ ಬಳಿಕ ಅದ್ಭುತವಾದ ತೀರ್ಮಾನಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿದ್ದಾರೆ. ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದ ಭ್ರಷ್ಟಾಚಾರ ಮತ್ತು ಧರ್ಮವಿರೋಧಿ ನೀತಿಯಿಂದ ಜನರು ಆಕ್ರೋಶಗೊಂಡಿದ್ದರು. ಇದರಿಂದ ಬಿಜೆಪಿಗೆ ಅಧಿಕಾರ ಲಭಿಸಿದೆ ಎಂದು ಅವರು ವಿವರಿಸಿದರು. ಕಾಂಗ್ರೆಸ್ ಪಕ್ಷ ಇನ್ನು 10 ವರ್ಷ ಕಳೆದರೂ ರಾಜ್ಯದಲ್ಲಿ ಆಡಳಿತ ಗಳಿಸದು ಎಂದು ಕಾಂಗ್ರೆಸ್ ಮುಖಂಡರಿಗೆ ಗೊತ್ತಿದೆ. ಮುಖ ಉಳಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ ಎಂದರು,
ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದೆ. ಒಂದು ಪಕ್ಷವನ್ನೇ ಸರಿಯಾಗಿ ನಡೆಸಲು ಆಗದವರು ಇಷ್ಟು ದೊಡ್ಡ ರಾಜ್ಯದ ಆಡಳಿತ ನಡೆಸಲು ಅವರಿಂದ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಇತಿಹಾಸ ಸೇರುತ್ತಿರುವ ಪಕ್ಷ ಎಂದು ನುಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ಟೆಂಗಿನಕಾಯಿ, ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಕುಂದಗೋಳಮಠ, ಶಾಸಕರಾದ ಶ್ರೀ ಅಮೃತ್ ದೇಸಾಯಿ, ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.