ಉಡುಪಿ:
ಕರ್ನಾಟಕ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸಿರುವ ಕಾಂಗ್ರೆಸ್ ಪಕ್ಷ ಇದೀಗ ತನ್ನ ಐದನೇ ಗ್ಯಾರಂಟಿ ಘೋಷಣೆ ಮಾಡಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವುದಾಗಿ ಘೋಷಣೆ ಮಾಡಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಗೃಹಜ್ಯೋತಿ – 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ – ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ., ಅನ್ನಭಾಗ್ಯ- ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಯುವ ನಿಧಿ – ಪದವೀಧರರಿಗೆ 3000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ ನಿರುದ್ಯೋಗ ಭತ್ಯೆ ನೀಡುವ 4 ಘೋಷಣೆಗಳನ್ನು ಮಾಡಿದೆ. ಇದೀಗ ರಾಹುಲ್ ಗಾಂಧಿ 5ನೇ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಕಾಂಗ್ರೆಸ್ ಪಕ್ಷದ ಸ್ಚಾರ್ ಪ್ರಚಾರಕ ರಾಹುಲ್ ಗಾಂಧಿ ಮಾಹಿತಿ ನೀಡಿದ್ದು, ಮಂಗಳೂರಿನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ರಾಹುಲ್ ಗಾಂಧಿ 5ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದರು. ಮಂಗಳೂರು ನಗರದ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣ ಪ್ರಚಾರದ ಬಹಿರಂಗ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.
ಸಾರ್ವಜನಿಕ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದಾಗಿ ಅವರು ತಿಳಿಸಿದ್ದು, ಮೊದಲ ನಾಲ್ಕೂ ಗ್ಯಾರಂಟಿ ಯೋಜನೆಗೆ ಸೇರಿ ಈ ಐದೂ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಅವರು, ‘ಮೊದಿ ಅವರೇ ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಹೇಳಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಒಂದು ಸವಾಲು ಹಾಕುತ್ತಿದ್ದೇನೆ. ನಮ್ಮ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ನಾವು ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ. ಅಧಿಕಾರಕ್ಕೆ ಬಂದು ಒಂದು ಗಂಟೆಯೊಳಗೆ ನಾವು ಘೋಷಿಸಿದ ನಾಲ್ಕು ಗ್ಯಾರಂಟಿಗಳ ಜಾರಿ ಗ್ಯಾರಂಟಿ. ನಾವು ಈ ಯೋಜನೆಗಳನ್ನು ಜಾರಿ ಮಾಡಿದ ನಂತರ ನೀವು ದೇಶದಲ್ಲಿ ಈ ಯೋಜನೆಗಳನ್ನು ಜಾರಿ ಮಾಡಲು ಸಿದ್ಧರಿದ್ದೀರಾ? ಎಂದು ಸವಾಲು ಹಾಕಿದ್ದಾರೆ.
ಮೀನುಗಾರರೊಂದಿಗೆ ರಾಹುಲ್ ಸಂವಾದ, 1 ಲಕ್ಷ ಜೀವವಿಮೆ ಭರವಸೆ
ಉಡುಪಿ ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿ ಕಾಪು ವಿಧಾನಸಭಾ ಕ್ಷೇತ್ರದ ಉಚ್ಚಿಲ ಎಂಬಲ್ಲಿ ಮೀನುಗಾರರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭ ಮೀನುಗಾರರಿಗೆ ಕೊಡುಗೆ ಘೋಷಿಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೀನುಗಾರರಿಗೆ ಹತ್ತು ಲಕ್ಷ ರೂಪಾಯಿ ಜೀವ ವಿಮೆ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ಮತ್ತು 25 ರೂಪಾಯಿ ಸಬ್ಸಿಡಿಯೊಂದಿಗೆ 500 ಲೀಟರ್ ಡೀಸೆಲ್ ವಿತರಿಸುತ್ತೇವೆ ಎಂದು ಹೇಳಿದರು.
ಮೀನುಗಾರರೊಂದಿಗೆ ಸಮಸ್ಯೆಗಳ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಮೀನುಗಾರರ ಅಗತ್ಯತೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಅತ್ಯಂತ ಸೂಕ್ಷ್ಮವಾಗಿರುತ್ತದೆ ಮತ್ತು ನಿಮ್ಮ ಹಿತಾಸಕ್ತಿಗಳನ್ನು ನಾವು ರಕ್ಷಿಸುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಇದು ಜನರು ಆರಿಸಿದ ಸರ್ಕಾರವಲ್ಲ. ನೀವು ಆರಿಸಿದ ಸರ್ಕಾರವಲ್ಲ. ಕಳ್ಳತನದಿಂದ ರಚನೆಯಾಗಿದೆ ಎಂದು ಹೇಳಿದ ಅವರು, ಬಡವರು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಇಡೀ ಕರ್ನಾಟಕ ರಾಜ್ಯದ ಜನರಿಗೆ ಈ ಸರಕಾರ ಕಳ್ಳತನದಿಂದ ರಚನೆಯಾಗಿದೆ ಎಂಬುದು ಗೊತ್ತಿದೆ, ಕೋಟ್ಯಂತರ ರೂ ಬಂಡವಾಳ ಹಾಕಿ ಶಾಸಕರನ್ನು ಖರೀದಿ ಮಾಡಿ ಸರಕಾರ ರಚಿಸಿದ್ದು ತಮಗೆಲ್ಲಾ ಗೊತ್ತಿದೆ. ಬಿಜೆಪಿಯಲ್ಲಿ ಸಿಎಂ ಆಗಬೇಕಿದ್ದರೆ 2.5 ಸಾವಿರ ಕೋಟಿ ರೂ ಕೊಡಬೇಕು ಎಂದು ಬಿಜೆಪಿಯ ಎಂಎಲ್ಎ ಹೇಳಿದ್ದಾರೆ. ಗುತ್ತಿಗೆದಾರರೇ ರಾಜ್ಯ ಬಿಜೆಪಿ ಸರ್ಕಾರದ ನಲ್ವತ್ತು ಪರ್ಸೆಂಟ್ ಕಮಿಷನ್ ಕುರಿತು ಹೇಳ್ತಾರೆ. ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಪೂಜ್ಯ ದಿಂಗಲೇಶ್ವರ ಸ್ವಾಮಿಯವರು ನನ್ನ ಬಳಿಯೂ ಹಣ ಕೇಳಿದ್ದಾರೆ ಎಂದು ಹೇಳಿದ್ದಾಗಿ ರಾಹುಲ್ ಗಾಂಧಿ ಹೇಳಿದರು.