ಬಿಜೆಪಿಯವರಿಗೆ ಜನರ ಬಳಿ ದೂರಲು ಯಾವ ವಿಷಯವೂ ಇಲ್ಲ
ಬೆಳಗಾವಿ:
ಬಿಜೆಪಿಯವರು ಭ್ರಷ್ಟಾಚಾರ , ಬೆಲೆಏರಿಕೆ, ಧರ್ಮ ರಾಜಕಾರಣ ಮಾಡಿದ್ದು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ 135 ಸ್ಥಾನವನ್ನು ಗಳಿಸಿರುವುದು ಬಿಜೆಪಿಯವರ ಭಯಕ್ಕೆ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಅಥಣಿ ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಸಂತೋಷವಾಗಿದ್ದಾರೆ. ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಚಾಲನೆ ದೊರೆಯಲಿದ್ದು, 1.28 ಕೋಟಿ ಕುಟುಂಬಗಳಿಗೆ ಮಾಹೆಯಾನ 2000 ರೂ. ನೆರವು ನೀಡುವ ದೇಶದಲ್ಲಿಯೇ ದೊಡ್ಡ ಯೋಜನೆಯಾಗಿದೆ. ನೇಕಾರರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಿದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನವನ್ನು ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಿಂದ ಗುತ್ತಿಗೆದಾರರ ಬಿಲ್ಲುಗಳು ಪಾವತಿಯಾಗಿಲ್ಲ. ನಮ್ಮ ಸರ್ಕಾರ ಯಾರ ಗುತ್ತಿಗೆದಾರರ ಬಿಲ್ ಪಾವತಿಗೂ ತೊಂದರೆ ಮಾಡುವುದಿಲ್ಲ. ಮೂರು ವರ್ಷದಿಂದ ಬಿಲ್ ಪಾವತಿ ಮಾಡದೇ ಇದ್ದ ಬಿಜೆಪಿಯವರು ಹೋರಾಟ ಮಾಡಲು ಯಾವ ನೈತಿಕತೆಯೂ ಇಲ್ಲ. ಬಿಜೆಪಿಯವರಿಗೆ ಜನರ ಬಳಿ ದೂರಲು ಯಾವ ವಿಷಯವೂ ಇಲ್ಲ. ಆದ್ದರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರು ಸೇರಿ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯ ಲೋಕಸಭಾಧ್ಯಕ್ಷರ ಮುಂದಿದೆ. ರಾಹುಲ್ ಗಾಂಧಿಯವರು ಅಧಿವೇಶನದಲ್ಲಿ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಕೇಂದ್ರಸರ್ಕಾರದ ವಿರುದ್ಧ ಕಟು ಟೀಕೆ ಮಾಡಿರುವುದರಿಂದ ದೂರು ನೀಡಿದ್ದಾರೆ ಎಂದರು.
ಸಚಿವ ಚೆಲುವರಾಯಸ್ವಾಮಿಯವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಈ ಆರೋಪ ಎಲ್ಲಿ ಕೇಳಿಬಂದಿದೆ ಎಂದು ಪ್ರಶ್ನಿಸಿದರು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಹೇಳಿಕೆಯನ್ನು ಗಮನಿಸಬೇಕು ಎಂದರು.
ಸಂತೋಷ್ ಪಾಟೀಲ್ ಪ್ರಕರಣ: ಕಾನೂನು ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ
ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬದವರು ಪೋಲಿಸರಿಂದ ನಮಗೆ ನ್ಯಾಯ ದೊರೆತಿಲ್ಲ, ಸಿಐಡಿ ಗೆ ವಹಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರ ಮಾಡಿ, ಕಾನೂನು ಇಲಾಖೆಯೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು ಎಂದರು.
ಅಶೋಕ್ ಹತಾಶರಾಗಿದ್ದಾರೆ
ಮಾಜಿ ಸಚಿವ ಆರ್.ಅಶೋಕ್ ಅವರು ತಮ್ಮ ಸರ್ಕಾರ ಬಿನ್ ಲ್ಯಾಡೆನ್ ಸರ್ಕಾರ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಹಾಗಾಗಿ ಹತಾಶರಾಗಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿದ್ದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.
ಅಂಗವಿಕಲ ವ್ಯಕ್ತಿಯ ಮೇಲೆ ಹಲ್ಲೆ : ಪೋಲೀಸ್ ಅಮಾನತು
ಪೋಲೀಸರು ಅಂಗವಿಕಲ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಮಾತನಾಡಿ, ಪೋಲೀಸರು ಮಾಡಿದ್ದು ತಪ್ಪು. ಹಲ್ಲೆ ನಡೆಸಿದ ಅಧಿಕಾರಿಯನ್ನು ಅಮಾನತುಗೊಳಿಸಿ, ಇಲಾಖಾ ತನಿಖೆ ಕೈಗೊಳ್ಳಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ವರದಿ ಬಂದ ಕೂಡಲೇ ಗುತ್ತಿಗೆದಾರರ ಬಿಲ್ ಪಾವತಿ
ಗುತ್ತಿಗೆದಾರರ ಬಿಲ್ ಪಾವತಿಗೆ ಸಂಬಂಧಿಸಿದಂತೆ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ಆಗಿರುವ ಕಾಮಗಾರಿಗಳಿಗೆ 2-3 ವರ್ಷಗಳಾದರೂ ಬಿಲ್ ಬಾಕಿ ಉಳಿಸಿ ಹೋಗಿದ್ದಾರೆ. ನಾವು ಅಧಿಕಾರಕ್ಕೆ ಬಂದು ಮೂರು ತಿಂಗಳಾಗಿದೆ. ಆದರೆ, ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾವು ಹಿಂದಿನ ಸರ್ಕಾರದ ಮೇಲೆ 40 % ಕಮಿಷನ್ ಆರೋಪ ಮಾಡಿದ್ದೆವು. ಅದು ಪ್ರಮುಖವಾಗಿ ಚರ್ಚೆಯಾಗಿದೆ. ನಾವು ತನಿಖೆಯಿಂದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕೆಲಸ ಮಾಡದೇ ಹೋದರೇ, ಕೆಲಸ ಆಗಿದೆಯೋ ಇಲ್ಲವೋ ಎಂದು ತಿಳಿಯಬೇಕು. ಒಳ್ಳೆ ಕೆಲಸ ಮಾಡಿದವರಿಗೆ ತೊಂದರೆ ಕೊಡುವುದಿಲ್ಲ. ಬಿಲ್ ಕೂಡ ಪಾವತಿಸಲಾಗುವುದು. ನಾಲ್ಕು ತಂಡಗಳನ್ನು ರಚಿಸಿ ತನಿಖೆಯಾಗುತ್ತಿದೆ. ವರದಿ ಬಂದ ಕೂಡಲೇ ಪರಿಶೀಲಿಸಿ ತಪ್ಪು ಮಾಡದಿದ್ದರೆ ಬಿಲ್ ಪಾವತಿಸುತ್ತೇವೆ. ತಪ್ಪಾಗಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.