Home ಬೆಂಗಳೂರು ನಗರ ಉಪನಗರ ರೈಲು: 26 ತಿಂಗಳಲ್ಲಿ ಚಿಕ್ಕಬಾಣಾವರ- ಬೆನ್ನಿಗಾನಹಳ್ಳಿ ಕಾಮಗಾರಿ ಪೂರ್ಣ

ಉಪನಗರ ರೈಲು: 26 ತಿಂಗಳಲ್ಲಿ ಚಿಕ್ಕಬಾಣಾವರ- ಬೆನ್ನಿಗಾನಹಳ್ಳಿ ಕಾಮಗಾರಿ ಪೂರ್ಣ

6
0
Bengaluru Suburban Rail Project: Chikkabanavara- Benniganahalli work to be completed in 26 months
Bengaluru Suburban Rail Project: Chikkabanavara- Benniganahalli work to be completed in 26 months
Advertisement
bengaluru

ಲಿಂಗರಾಜಪುರ, ಶಾಂಪುರ, ಯಶವಂತಪುರದಲ್ಲಿ ಪ್ರಗತಿ ವೀಕ್ಷಿಸಿದ ಸಚಿವರಾದ ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್

ಬೆಂಗಳೂರು:

ಮಹತ್ತ್ವಾಕಾಂಕ್ಷಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯಲ್ಲಿ ಚಿಕ್ಕ ಬಾಣಾವರ ಮತ್ತು ಬೆನ್ನಿಗಾನಹಳ್ಳಿ ನಡುವೆ ನಡೆಯುತ್ತಿರುವ ಕಾರಿಡಾರ್-2 ಕಾಮಗಾರಿಗಳನ್ನು 26 ತಿಂಗಳಲ್ಲಿ ಮುಗಿಸಲಾಗುವುದು. ಒಟ್ಟಾರೆಯಾಗಿ, ನಾಲ್ಕೂ ಕಾರಿಡಾರ್ ಗಳ ಕೆಲಸಗಳು 2026ಕ್ಕೆ ಮುಗಿಸುವ ಉದ್ದೇಶ ಇದೆ. ಸ್ವಲ್ಪ ತಡ ಅಂದರೂ 2028ರೊಳಗೆ ಸಂಪೂರ್ಣಗೊಳಿಸಲಾಗುವುದು. ಈ ಗಡುವು ಇಟ್ಟುಕೊಂಡು ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಹೇಳಿದರು.

ಶುಕ್ರವಾರ ನಗರದ ಲಿಂಗರಾಜಪುರ, ಶಾಂಪುರ, ಹೆಬ್ಬಾಳ ಮತ್ತು ಯಶವಂತಪುರಗಳಲ್ಲಿ ನಡೆಯುತ್ತಿರುವ ಉಪನಗರ ರೈಲು ಯೋಜನೆಯ ಕಾಮಗಾರಿಗಳನ್ನು ಅವರು ಪರಿಶೀಲಿಸಿದರು. ಜತೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಮತ್ತು ಶಾಸಕ ಮುನಿರತ್ನ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಮುಂತಾದವರಿದ್ದರು.

bengaluru bengaluru

ಸ್ಥಳ ಪರಿಶೀಲನೆ ನಂತರ ಯಶವಂತಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕಾರಿಡಾರ್ -2 ಯೋಜನೆಗೆ 157 ಎಕರೆ ಭೂಮಿಯನ್ನು ನೈರುತ್ಯ ರೈಲ್ವೆಯಿಂದ ಗುತ್ತಿಗೆಗೆ ಪಡೆದುಕೊಳ್ಳಲಾಗಿದೆ. ಮಿಕ್ಕಂತೆ ಹಳಿ ಹಾಕಲು 5.11 ಎಕರೆ ಖಾಸಗಿ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಯೋಜನೆಗೆ 7.73 ಎಕರೆ ಸರಕಾರಿ ಜಮೀನು ಬೇಕಿದ್ದು, ಇದರಲ್ಲಿ 2.72 ಎಕರೆಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಒಟ್ಟಾರೆ ಈ ಕಾರಿಡಾರ್ ನಲ್ಲಿ ಇದುವರೆಗೂ‌ ಶೇ 10ರಿಂದ 15ರಷ್ಟು ಕಾಮಗಾರಿ‌ ಮುಗಿದಿದೆ. ಹತ್ತು ತಿಂಗಳಲ್ಲಿ ನೆಲಮಟ್ಟದ ಕಾಮಗಾರಿಗಳು ಪೂರ್ಣವಾಗಲಿ. ಶಾಂಪುರದಲ್ಲಿಯೂ ರೈಲ್ವೆ ಕೆಳಸೇತುವೆ ಕೆಲಸ ಮುಗಿಸಲಾಗವುದು ಎಂದು ವಿವರಿಸಿದರು.

ಮುಂದಿನ ಹಂತದಲ್ಲಿ ಹೀಳಲಿಗೆ- ರಾಜಾನುಕುಂಟೆ, ಕಾರಿಡಾರ್-3ರಲ್ಲಿ ಬೆಂಗಳೂರು – ದೇವನಹಳ್ಳಿ (ವಿಮಾನ ನಿಲ್ದಾಣ ಸಂಪರ್ಕ) ಮತ್ತು ಕಾರಿಡಾರ್-4ರಲ್ಲಿ ಕೆಂಗೇರಿ- ವೈಟ್‌ಫೀಲ್ಡ್‌ ಬೆಸೆಯಲಾಗುವುದು. ‌ಇದಲ್ಲದೆ, ಉಪನಗರ ರೈಲು ಯೋಜನೆಯನ್ನು ಚಿಕ್ಕಬಳ್ಳಾಪುರ, ಮೈಸೂರು, ಮಾಗಡಿ, ತುಮಕೂರು, ಗೌರಿಬಿದನೂರು, ಕೋಲಾರ ಮತ್ತು ಹೊಸೂರುಗಳಿಗೆ ವಿಸ್ತರಿಸುವ ಉದ್ದೇಶವಿದ್ದು, ಇದರ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಇದು ಕಾರ್ಯಗತವಾದರೆ ಯೋಜನೆಯು ಈಗಿನ 148 ಕಿ.ಮೀ.ಗಳಿಂದ 452 ಕಿ.ಮೀ.ಗಳಿಗೆ ಹಿಗ್ಗಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾರಿಡಾರ್‍‌-2ರಲ್ಲಿ ಬರುವ 12 ನಿಲ್ದಾಣಗಳನ್ನು ಇಪಿಸಿ ಮಾದರಿಯಲ್ಲಿ ನಿರ್ಮಿಸಲಿದ್ದು, ಈ ಸಂಬಂಧ ಟೆಂಡರ್ ಕರೆಯಲಾಗಿದೆ. ಈ ಪ್ರಕ್ರಿಯೆ ಆ.31ರಂದು ಮುಗಿಯಲಿದೆ. ಕಾರಿಡಾರ್‍‌-4ರ ವ್ಯಾಪ್ತಿಯ ಸಿವಿಲ್ ಕಾಮಗಾರಿಗಳಿಗೆ ಕೂಡ ಟೆಂಡರ್ ಮುಗಿದಿದ್ದು, ಸದ್ಯದಲ್ಲೇ ಈ ಕಾಮಗಾರಿಗಳನ್ನು ಬಿಡ್‌ದಾರರಿಗೆ ವಹಿಸಲಾಗುವುದು. 2025ರ ಅಕ್ಟೋಬರ್‍‌ನಿಂದ ಯೋಜನೆಯ ಮೊದಲ 10 ರೈಲುಗಳ ಪೂರೈಕೆ ಕೂಡ ಆರಂಭವಾಗಲಿದೆ ಎಂದು ಅವರು ನುಡಿದರು.
ತುಂಡು‌ ಗುತ್ತಿಗೆಗೆ ಅವಕಾಶ ಇಲ್ಲ ರೈಲ್ವೆ ‌ಕಾಮಗಾರಿಗಳನ್ನು ತುಂಡು ಗುತ್ತಿಗೆ ನೀಡುತ್ತಿರುವ ಆರೋಪಗಳ ಬಗ್ಗೆ ಸಚಿವರು ಉತ್ತರಿಸಿ, ಅಂತಹದಕ್ಕೆ ನಿಯಮಗಳಲ್ಲಿ ಅವಕಾಶ. ಒಂದು ವೇಳೆ ಗುತ್ತಿಗೆದಾರರು ಅಂತಹದ್ದು ಮಾಡಿರುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಈ ವರ್ಷ ₹1,000 ಕೋಟಿ ಮೀಸಲು

ಉಪನಗರ ಯೋಜನೆಗೆ ಒಟ್ಟು 15,767 ಕೋಟಿ ರೂ. ವೆಚ್ಚವಾಗುತ್ತಿದೆ. 2013ರ ಬಜೆಟ್‌ನಲ್ಲಿ ಅಂದಿನ ಮತ್ತು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಯೋಜನೆಗೆ ಎಸ್‌ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಘೋಷಿಸಿದ್ದು, ಪ್ರಸ್ತುತ ಹಣಕಾಸು ವರ್ಷದಲ್ಲಿ 1,000 ಕೋಟಿ ರೂ. ಒದಗಿಸಿದ್ದಾರೆ. ಮಿಕ್ಕಂತೆ ಜರ್ಮನಿಯ ಕೆಎಫ್‌ಡಬ್ಲ್ಯು, ಯೂರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ ಮತ್ತು ಲಕ್ಸಂಬರ್ಗ್‌ನಿಂದ ಒಟ್ಟು 7,438 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುವುದು. ಇದಕ್ಕಾಗಿ ಬರುವ ಡಿಸೆಂಬರ್‍‌ನಲ್ಲಿ ಸಹಿ ಹಾಕಲಾಗುವುದು. ಇದಾದ ನಂತರ ಕಾರಿಡಾರ್ 1 ಮತ್ತು 3ರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು ಎಂದು ಎಂ ಬಿ ಪಾಟೀಲ ತಿಳಿಸಿದರು.

ಸಚಿವರ ಭೇಟಿ ಎಲ್ಲೆಲ್ಲಿ?

ಮೊದಲಿಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಲಿಂಗರಾಜಪುರಕ್ಕೆ ಭೇಟಿ ನೀಡಿದ ಸಚಿವ ಎಂ.ಬಿ.ಪಾಟೀಲ ಅವರು ಅಲ್ಲಿ ನಡೆಯುತ್ತಿರುವ ತಡೆಗೋಡೆ ಕಾಮಗಾರಿಯನ್ನು ವೀಕ್ಷಿಸಿದರು. ಬಳಿಕ ಶಾಂಪುರದಲ್ಲಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಮತ್ತು ಹೆಬ್ಬಾಳದಲ್ಲಿ ನಿರ್ಮಾಣವಾಗಲಿರುವ ನಿಲ್ದಾಣದ ಉದ್ದೇಶಿತ ಸ್ಥಳಕ್ಕೆ ತೆರಳಿ, ಅಲ್ಲಿಯ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲಿಂದ ಯಶವಂತಪುರದ ಬ್ಯಾಚಿಂಗ್ ಪ್ಲಾಂಟ್‌ ಮತ್ತು ಲ್ಯಾಬೊರೇಟರಿಗಳಿಗೆ ಅವರು ಭೇಟಿ ನೀಡಿ ಪರಿಶೀಲಿಸಿದರು.
ಯಶವಂತಪುರ ಪ್ಲಾಂಟ್‌ನಲ್ಲಿ ಅವರು ಕಾಂಕ್ರೀಟ್‌ ಉತ್ಪಾದನೆಗೆ ಚಾಲನೆ ನೀಡಿದರು. ಜತೆಯಲ್ಲೇ ಗುಣಮಟ್ಟ ನಿಯಂತ್ರಣ ಪರೀಕ್ಷೆಯ ಪ್ರಯೋಗಾಲಯಕ್ಕೂ ತೆರಳಿ, ಅಲ್ಲಿಯ ಚಟುವಟಿಕೆಗಳನ್ನು ಪರಿಶೀಲಿಸಿದರು.


bengaluru

LEAVE A REPLY

Please enter your comment!
Please enter your name here