ವೀಡಿಯೋ ಅಪ್ಲೋಡ್ ಮಾಡಲು 15 ಕೋಟಿ ವೆಚ್ಚ: ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ. ಯುವತಿಯನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಅವರ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದ್ದಾರೆ.
ಕುಮಾರ ಕೃಪಾ ಅತಿಥಿ ಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ನಾನು ಮಾತನಾಡುತ್ತಿರುವುದನ್ನು ಷಡ್ಯಂತ್ರ ಮಾಡಿದವರು ಈಗಲೂ ನೋಡುತ್ತಿದ್ದಾರೆ. ರಾಜಕೀಯವಾಗಿ ರಮೇಶ್ ಜಾರಕಿಹೊಳಿ ಮುಗಿಸಲು ಷಡ್ಯಂತ್ರ ನಡೆದಿದೆ. ದಿನೇಶ್ ಕಲ್ಲಹಳ್ಳಿ ಅವರನ್ನು ಈ ಪ್ರಕರಣದಲ್ಲಿ ದಾರಿ ತಪ್ಪಿಸಲಾಗಿದೆ. ಅವರಿಗೆ ಮಾಹಿತಿ ಕೊಟ್ಟಿರುವವರು ಅವರನ್ನು ದಾರಿ ತಪ್ಪಿಸಿರುವ ಸಾಧ್ಯತೆಯಿದೆ ಎಂದು ಬಾಲಚಂದ್ರ ಹೇಳಿದ್ದಾರೆ.
ಇದೇ ವೇಳೆ ಹನಿಟ್ರ್ಯಾಪ್ ಮಾಡಿದ ಆ ಯುವತಿಯ ಹಿಂದೆ ನಾಲ್ಕು ಪುರುಷರಿದ್ದಾರೆ. ಆ ನಾಲ್ಕು ಮಂದಿ ಪೊಲೀಸರ ಕೈಗ ಸಿಗಬೇಕು. ಆಮೇಲೆ ಪ್ರಕರಣದ ಸಂಪೂರ್ಣ ಒಳಸುಳಿಗಳು ಹೊರಗೆ ಬರಲಿದೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿ ಅವರು ಒಪ್ಪಿದ ಬಳಿಕ ನಾವು ದೂರು ಕೊಡುತ್ತೇವೆ. ಅವರು ದೂರು ನೀಡದೇ ಇದ್ದರೆ ಆ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ದಿನೇಶ್ ಕಲ್ಲಹಳ್ಳಿ ಈಗ ದೂರು ವಾಪಾಸ್ ಪಡೆದುಕೊಂಡಿದ್ದಾರೆ. ನಾವು ಸುಮ್ಮನಾಗುತ್ತೇವೆ ಎಂದು ಹೇಳಿಲ್ಲ. ಪ್ರಕರಣದ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದುವರೆಯುತ್ತೇವೆ. ಪ್ರಕರಣದಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಈ ಸಿಡಿ ನಕಲಿ ಸಿಡಿ ಎಂದು ನಾನು ಈ ಮೊದಲು ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಈ ಸಿಡಿ ನಕಲಿ ಎಂದು ನಾವು ನೀವು ಹೇಳಿದರೆ ಆಗುವುದಿಲ್ಲ ಅದನ್ನು ಪರೀಕ್ಷೆ ಮಾಡಿ ತನಿಖೆ ಬಳಿಕ ನಕಲಿ ಎಂದು ಹೇಳಬೇಕು. ಅದು ಪ್ರಯೋಗಾಲಯದಲ್ಲಿ ಪರೀಕ್ಷೆಯಾಗಿ ನಕಲಿ ಎಂದು ಬರಬೇಕು.
ವೀಡಿಯೋ ಅಪ್ಲೋಡ್ ಮಾಡಲು 15 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ನಮ್ಮ ಮೂಲಗಳ ಪ್ರಕಾರ ಮಹಿಳೆ ಮುಂದೆ ತನ್ನ ಭವಿಷ್ಯದ ಬಗ್ಗೆ ಆ ಕಾಣದ ಕೈಗಳಿಗೆ ಕೇಳಿದಾಗ ಆಕೆಗೆ 50 ಲಕ್ಷ ನಗದು ಮತ್ತು ದುಬೈನಲ್ಲಿ ಕೆಲಸ ಕೊಡಿಸೋದಾಗಿ ಆಮಿಷ ನೀಡಿದ್ದಾರೆ. 15 ಕೋಟಿ ಹಣ ವ್ಯಯ ಮಾಡಿ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಮಹಿಳೆ ಹಿಂದೆ ಇಬ್ಬರು, ಇಬ್ಬರ ಹಿಂದೆ ಮೂವರು ಮತ್ತು ಮೂವರ ಹಿಂದೆ ನಾಲ್ಕು ಜನ ವ್ಯವಸ್ಥಿತವಾಗಿ ವೀಡಿಯೋ ಹರಿಬಿಟ್ಟಿದ್ದಾರೆ. ಆದ್ರೆ ವೀಡಿಯೋ ಅಪ್ಲೋಡ್ ಮಾಡಿದವರ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದರು.