ಮುಂದಿನ ವರ್ಷದೊಳಗೆ 10,000 ಜನೌಷಧಿ ಕೇಂದ್ರ ತೆರೆಯುವ ಗುರಿ
ಬ್ರಹ್ಮಾವರ (ಉಡುಪಿ):
ಮುಂದಿನ ವರ್ಷ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿದ್ದು ಅಷ್ಟರೊಳಗೆ ದೇಶದಲ್ಲಿ 10,000 ಜನೌಷಧಿ ಕೇಂದ್ರಗಳನ್ನು ತೆರೆಯಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಮೇಘಾಲಯದ ಶಿಲ್ಲಾಂಗಿನಲ್ಲಿ ಆರಂಭಿಸಲಾಗಿರುವ ದೇಶದ 7500ನೇ ಜನೌಷಧಿ ಕೇಂದ್ರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಪ್ರಧಾನಿಯವರು ಮಾತನಾಡುತ್ತಿದ್ದರು.
ಅದೇರೀತಿ ತಲಾ 75 ಜನೌಷಧಿ ಕೇಂದ್ರಗಳನ್ನು ಹೊಂದಿರುವ ಕನಿಷ್ಠವೆಂದರೂ 75 ಜಿಲ್ಲೆಗಳು ರಾಷ್ಟ್ರದಲ್ಲಿ ಇರಬೇಕು ಎಂಬುದು ತಮ್ಮ ಆಶಯವಾಗಿದೆ. ಈ ಗುರಿಯನ್ನು ತಲುಪಲು ರಾಜ್ಯ ಸರ್ಕಾರಗಳ ಸಹಕಾರವನ್ನೂ ತಾವು ಬಯಸುವುದಾಗಿ ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಿಯವರು ದೇಶದ ವಿವಿಧ ರಾಜ್ಯಗಳ ಜನೌಷಧಿ ಫಲಾನುಭವಿಗಳು ಹಾಗೂ ಮಾರಾಟಗಾರರೊಂದಿಗೆ ನೇರ ಸಂವಾದ ನಡೆಸಿದರು.
ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಪ್ರಸ್ತಾವಿಕ ಭಾಷಣ ಮಾಡಿ ಪ್ರಧಾನಿಯವರನ್ನು ಸ್ವಾಗತಿಸಿದರು.

2014ರಲ್ಲಿ 86 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ವಹಿವಾಟು 7.29 ಕೋಟಿ ರೂಪಾಯಿ ಇತ್ತು. ಅಂದು ಜನೌಷಧಿ ಕೇಂದ್ರಗಳಲ್ಲಿ 131 ನಮೂನೆ ಔಷಧಗಳಷ್ಟೇ ಲಭ್ಯವಿತ್ತು. ಇಂದು 1449 ನಮೂನೆ ಔಷಧಗಳು ಹಾಗೂ 204 ಮೆಡಿಕಲ್ ಡಿವೈಸ್ ಗಳು ಲಭ್ಯವಿವೆ. ಇಂದು ದೇಶಾದ್ಯಂತ 7499 ಜನೌಷಧಿ ಕೇಂದ್ರಗಳು ಸುಮಾರು 600 ಕೋಟಿ ರೂಪಾಯಿ ವಹಿವಾಟು ಮಾಡುತ್ತಿದೆ. ಇದರಿಂದ ಏನಿಲ್ಲವೆಂದರೂ ಜನರಿಗೆ 3600 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಜನೌಷಧಿ ಮಾರಾಟಗಾರರು ಉತ್ತಮ ಸೇವೆ ಒದಗಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ವಹಿವಾಟಿನಲ್ಲಿ ಶೇಕಡಾ 60ರಷ್ಟು ಹೆಚ್ಚಳವಾಗಿದೆ ಎಂದು ಸದಾನಂದ ಗೌಡ ವಿವರಿಸಿದರು.
ಜನೌಷಧಿಯನ್ನು ಬಳಸುವಂತೆ ಕರಾವಳಿ ಪ್ರದೇಶದಲ್ಲಿ ಜನರನ್ನು ಉತ್ತೇಜಿಸುತ್ತಿರುವ ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್ ಅವರಿಗೆ ಸದಾನಂದ ಗೌಡ ಅವರು ನಿರ್ಹಹಿಸುವ ಕೇಂದ್ರ ಔಷಧ ಇಲಾಖೆಯು ಪ್ರತಿಷ್ಠಿತ “ಜನೌಷಧಿ ಚಿಕತ್ಸಿಕ” ಪ್ರಶಸ್ತಿಯನ್ನು ನೀಡಿದೆ. ಹೃದ್ರೋಗ ತಜ್ಞರಾಗಿರುವ ಡಾ ಕಾಮತ್ ಅವರು ಸ್ವತಃ ಜನೌಷಧಿ ಕೇಂದ್ರವನ್ನು ತೆರೆದಿದ್ದಾರಲ್ಲದೆ ಅದರಲ್ಲಿ ಅತ್ಯಂತ ಕಡಿಮೆ ದರದಲ್ಲಿ ಇಸಿಜಿ ತಪಾಸಣೆ ಸೌಲಭ್ಯವನ್ನೂ ಒದಗಿಸುತ್ತಿದ್ದಾರೆ. ಇನ್ನೂ ಹಲವು ಜನರಿಗೆ ಜನೌಷಧಿ ಕೇಂದ್ರ ತೆರೆಯಲು ಪ್ರೋತ್ಸಾಹ ಹಾಗೂ ನೆರವು ನೀಡಿದ್ದಾರೆ.

ಪ್ರಧಾನಿ ಮೋದಿಯವರು ಡಾ ಕಾಮತ್ ಅವರೊಂದಿಗೆ ಸಂವಾದ ನಡೆಸಿದರು. ಜನೌಷಧಿ ಸೇವೆಗಾಗಿ ಹಾಗೂ ಇಸಿಜಿ ಸೇವೆ ಮೂಲಕ ನೂರಾರು ಜನರ ಪ್ರಾಣ ಉಳಿಸಿರುವ ಡಾ ಕಾಮತ್ ಅವರನ್ನು ಅಭಿನಂದಿಸಿದರು.
ಬ್ರಹ್ಮಾವರದ ಕಾರ್ಯಕ್ರಮದಲ್ಲಿ ಸಚಿವ ಸದಾನಂದ ಗೌಡ ಅವರು ಡಾ. ಪದ್ಮನಾಭ್ ಕಾಮತ್ ಅವರಿಗೆ “ಜನೌಷಧಿ ಚಿಕಿತ್ಸಿಕ್”, ಉತ್ತರ ಪ್ರದೇಶ ಮೊರದಾಬಾದಿನ ವಿನಿತಾ ಜೈನ್ ಅವರಿಗೆ “ಜನೌಷಧಿ ಜ್ಯೋತಿ” ಮತ್ತು ಬೆಂಗಳೂರಿನ ಗೌತಮ್ ಜೈನ್ ಅವರಿಗೆ “ಜನೌಷಧಿ ಸಾರಥಿ” ಪ್ರಶಸ್ತಿಗಳನ್ನು ಪ್ರದಾನ ಮಾಡಿ ಅಭಿನಂಧಿಸಿದರು.
“2022ರಲ್ಲಿ ದೇಶಕ್ಕೆಸ್ವಾತಂತ್ರ್ಯ ಬಂದು 75 ವರ್ಷವಾಗುತ್ತಿದ್ದು ಅಷ್ಟರೊಳಗೆ 10,000 ಜನೌಷಧಿ ಕೇಂದ್ರಗಳನ್ನು ತೆರೆಯಬೇಕು ಮತ್ತು ತಲಾ 75 ಜನೌಷಧಿ ಕೇಂದ್ರಗಳನ್ನು ಹೊಂದಿರುವ ಕನಿಷ್ಠವೆಂದರೂ 75 ಜಿಲ್ಲೆಗಳು ಇರಬೇಕು” ಎಂಬ ಪ್ರಧಾನಿಯವರ ಆಶಯವನ್ನು ನನಸಾಗಿಸಲು ತಮ್ಮ ಇಲಾಖೆಯು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತದೆ ಎಂದು ಸಚಿವ ಸದಾನಂದ ಗೌಡ ಅವರು ಈ ನಡುವೆ ಟ್ವೀಟೊಂದರಲ್ಲಿ ತಿಳಿಸಿದ್ದಾರೆ.
ಬ್ರಹ್ಮಾವರದ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮತ್ತಿತರರು ಉಪಸ್ಥಿತರಿದ್ದರು.