ಬೆಂಗಳೂರು:
ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಜೀವ ರಕ್ಷಣೆಗೆ ಮುಂದಾದ ಮತ್ತು ಕಠಿಣ ಸವಾಲುಗಳನ್ನು ಎದುರಿಸಿದ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸೇವೆಯ ಬಗ್ಗೆ ದೇಶ ಹೆಮ್ಮೆ ಪಡುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ನಗರದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ೨೩ ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಖ್ಯಾತ ನರರೋಗ ತಜ್ಞ ಡಾ|| ಅಲಂಗಾರ್ ಸತ್ಯ ರಂಜನ್‌ದಾಸ್ ಹೆಗ್ಡೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು. ಶ್ರೇಯಾಮಕ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
LIVE: President Kovind addresses the 23rd annual convocation of Rajiv Gandhi University of Health Sciences at Bengaluru, Karnataka https://t.co/SAecNn0Sac
— President of India (@rashtrapatibhvn) February 7, 2021
ಬಳಿಕ ಮಾತನಾಡಿದ ರಾಷ್ಟ್ರಪತಿ ಅವರು, ಕೊರೋನಾ ಸೇನಾನಿಗಳ ಸೇವೆ ಶ್ಲಾಘನೀಯ. ಅವರ ಕೆಲಸವನ್ನು ದೇಶ ಎಂದೆಂದಿಗೂ ಸ್ಮರಿಸುತ್ತದೆ ಎಂದರು.
ಜಗತ್ತಿನಾದ್ಯಂತ ಕೋವಿಡ್ ಸಾಂಕ್ರಾಮಿಕದಿಂದ ಸಾಕಷ್ಟು ಸಂಕಷ್ಟ ಎದುರಾಯಿತು. ಈ ವೇಳೆ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಇವರೆಲ್ಲರೂ ಸಮಾಜಕ್ಕೆ ಮಾದರಿಯಾಗಿದ್ದಾರೆ, ಇವರ ಬಗ್ಗೆ ನಮಗೆಲ್ಲಾ ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಮೊದಲಿನಿಂದಲೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸಹ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಉತ್ತಮವಾಗಿ ಕೆಲಸ ಮಾಡಿರುವುದು ಪ್ರಶಂಸನೀಯ. ಮತ್ತೊಬ್ಬರು ಅಪಾಯದಲ್ಲಿದ್ದರೆ ನಾವು ಸುರಕ್ಷಿತವಲ್ಲ ಎಂಬುದನ್ನು ಕೋವಿಡ್ ಸಾಂಕ್ರಾಮಿಕ ಕಲಿಸಿದೆ. ವಿಶ್ವ ಭ್ರಾತೃತ್ವದಲ್ಲಿ ಇದೊಂದು ಪಾಠ ಎಂದು ರಾಮನಾಥ್ ಕೋವಿಂದ್ ವಿಶ್ಲೇಷಿಸಿದರು.
ಅಪರೂಪಕ್ಕೆ ಎದುರಾಗುವ ಆರೋಗ್ಯ ಬಿಕ್ಕಟ್ಟುಗಳಲ್ಲಿ ಕೋವಿಡ್-೧೯ ವಿಭಿನ್ನವಾಗಿದೆ. ಮುಂದಿನ ದಿನಗಳಲ್ಲಿ ಇಂತಹುದೇ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ವಿಜ್ಞಾನಿಗಳ ವರ್ಗ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಸರಿಯಾದ ಹೆಜ್ಜೆಗಳನ್ನಿಟ್ಟು ನಿರೀಕ್ಷೆಯೊಂದಿಗೆ ವಿಶ್ವ ಸಾಗಬೇಕಾಗಿದೆ ಎಂದು ಅವರು ಹೇಳಿದರು.
ಆರೋಗ್ಯ ವಲಯದ ವಿಕಾಸವು ಎಲ್ಲಾ ಭಾಗಿದಾರರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಆವಿಷ್ಕಾರದ ಬಳಕೆಗೆ ಕರೆ ನೀಡುತ್ತದೆ. ದೇಶದಲ್ಲಿನ ಆರೋಗ್ಯ ರಕ್ಷಣೆ ವ್ಯವಸ್ಥೆಯು ರೋಗಪತ್ತೆ, ಚಿಕಿತ್ಸೆ ಸೇರಿದಂತೆ ಎಲ್ಲಾ ಹಂತಗಳಲ್ಲಿ ಬದಲಾಗುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು.
ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ|| ಕೆ.ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. UNI