ಬೆಂಗಳೂರು:
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕೆ ಬಿಜೆಪಿ ಮತ್ತು ರಾಜ್ಯ ಸರಕಾರಗಳು ಸಮನ್ವಯತೆಯಿಂದ ಕೆಲಸ ಮಾಡಲಿವೆ. ಜನರ ಪ್ರಾಣ ರಕ್ಷಿಸುವ ವಿಚಾರಕ್ಕೆ ಗರಿಷ್ಠ ಆದ್ಯತೆ ಕೊಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮುಖ್ಯಮಂತ್ರಿಗಳಾದ ಬಿ,ಎಸ್,ಯಡಿಯೂರಪ್ಪ ಅವರ ಜೊತೆ ತಾವು ಈ ಕುರಿತು ಇಂದು ಮಾತುಕತೆ ನಡೆಸಿದ್ದಾಗಿ ಅವರು ಹೇಳಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಸೇವಾ ಹೀ ಸಂಘಟನ್ ಚಿಂತನೆಯಡಿ ಪಕ್ಷದ ಮುಖಂಡರು ಈಗಾಗಲೇ ಕೋವಿಡ್ ಸಹಾಯವಾಣಿ ಆರಂಭಿಸಿರುವುದು, ನಿಯಂತ್ರಣ ಕೊಠಡಿ ತೆರೆದಿರುವುದು, ವೈದ್ಯಕೀಯ ಕಿಟ್‍ಗಳ ವಿತರಣೆ, ಆಹಾರ ಪೊಟ್ಟಣಗಳ ವಿತರಣೆ, ರಕ್ತದಾನ ಶಿಬಿರಗಳ ಸಂಘಟನೆ ಮಾಡಿದ್ದರ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಲಾಯಿತು ಎಂದರು.
ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರವು ಲಾಕ್‍ಡೌನ್ ವಿಸ್ತರಿಸಿರುವುದು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸಮಸ್ಯೆ ಬಾಧಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ಬೆಡ್ ಸಮಸ್ಯೆ ಪರಿಹಾರ, ಆಕ್ಸಿಜನ್ ಕೊರತೆ ಇರುವಲ್ಲಿಗೆ ತ್ವರಿತ ಸ್ಪಂದಿಸುವ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾಗಿ ತಿಳಿಸಿದರು.
ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರನ್ನು ಭೇಟಿಯಾಗಿ ರಾಜ್ಯದ ಕೋವಿಡ್ ಸ್ಥಿತಿಗಳ ಕುರಿತು ಚರ್ಚಿಸಿ,
— Nalinkumar Kateel (@nalinkateel) May 10, 2021
ಬಿಜೆಪಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಕೋವಿಡ್ ನೆರವಿನ ‘ಸೇವೆಯೇ ಸಂಘಟನೆ – 2.0’ ಪರಿಹಾರ ಕಾರ್ಯಗಳ ವಿವರಗಳನ್ನು ತಿಳಿಸಿ, ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಬೇಕೆಂದು ಮನವಿ ಮಾಡಲಾಯಿತು. pic.twitter.com/eRArAqQ6bP
ಜನರು ನಮಗೆ ಜನಸೇವೆಗಾಗಿ ಆಶೀರ್ವಾದ ಮಾಡಿದ್ದಾರೆ. ಅದನ್ನು ಆದ್ಯತೆಯಿಂದ ನಿರ್ವಹಿಸಲಿದ್ದೇವೆ ಎಂದೂ ಅವರು ಸ್ಪಷ್ಟಪಡಿಸಿದರು. ಸರಕಾರ ಮತ್ತು ಪಕ್ಷವು 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಕೋವಿಡ್ ನಿರ್ವಹಣೆಗೆ ವಿಶೇóಷ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಯಾವುದೇ ರೀತಿಯ ನಾಯಕತ್ವ ಬದಲಾವಣೆ ಇಲ್ಲ. ಈಗ ರಾಜಕಾರಣ ಮಾಡುವ ಕೆಲಸಗಳಿಲ್ಲ. ಕೋವಿಡ್ ನಿಯಂತ್ರಣವೊಂದೇ ಕೆಲಸ. ಜನರ ಪ್ರಾಣ ಉಳಿಸುವುದು ಮತ್ತು ರಕ್ಷಿಸುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ಅದಕ್ಕೇ ಸಚಿವರು, ಶಾಸಕರು ಮತ್ತು ಪಕ್ಷದ ಮುಖಂಡರು ಒತ್ತು ನೀಡಲಿದ್ದಾರೆ ಎಂದು ಅವರು ಈ ಕುರಿತು ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದಲ್ಲಿ ಕೋವಿಡ್‍ಗೆ ಸಂಬಂಧಿಸಿ ಬಳಸುವ ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣ ಉಚಿತವಾಗಿ ಒದಗಿಸುವಂತೆ ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿದ್ದಾಗಿ ಹೇಳಿದರು.