ಮಂಡ್ಯ:
ಸಾರ್ವಜನಿಕರೊದಿಗೆ ವಾಗ್ವಾದ ಮಾಡುವುದಕ್ಕಿಂತ ತಿಳುವಳಿಕೆ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಕೊವಿಡ್ ವಾರಿಯರ್ಸ್ ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆಕ್ಸಿಜನ್ ವ್ಯವಸ್ಥೆ ಇರುವ ಆಂಬುಲೆನ್ಸ್ ಪ್ರತಿ ತಾಲೂಕಿನಲ್ಲೂ ಲಭ್ಯವಿರಬೇಕು. ಕೊರೊನಾ ಟೆಸ್ಟಿಂಗ್ ಮಾಡಿಸಿದವರು ಫಲಿತಾಂಶ ಬರುವ ತನಕ ಕ್ವಾರಂಟೈನ್ ಆಗಿರುವಂತೆ ನೋಡಿಕೊಳ್ಳಬೇಕು. ಅಲ್ಲದೆ ಆಸ್ಪತ್ರೆಗಳಿಗೆ ಅಗತ್ಯವಿರುವ ವಸ್ತುಗಳನ್ನು ಎರಡು ದಿನಗಳಲ್ಲಿ ಖರೀದಿಸಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದರು.
ಕೊರೊನಾ ನಿಯಂತ್ರಣ ಸಂಬಂಧ ಮಂಡ್ಯ ಜಿಲ್ಲೆಯ ಮತ್ತು ತಾಲೂಕು ಅಧಿಕಾರಿಗಳ ಜೊತೆ ವಿಕಾಸಸೌಧದಿಂದ ವಿಡಿಯೊಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಶ್ರಮವಹಿಸಿ, ಪ್ರತಿ ತಾಲೂಕಿನಲ್ಲೂ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು. ಯಾವುದೆ ಪರಿಸ್ಥಿತಿಯಲ್ಲೂ ಜಿಲ್ಲೆಯಲ್ಲಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ವೀಕೆಂಡ್ ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಪೊಲೀಸರು ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿಯೂ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಹಾಗೂ ಹಾಸ್ಟೆಲ್ ಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಸಚಿವರು ಸೂಚನೆ ನೀಡಿದರು.
ಹೆಚ್ಚುವರಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ
ಜಿಲ್ಲಾ ಕೇಂದ್ರ ಮಂಡ್ಯದಲ್ಲಿ ಹೆಚ್ಚುವರಿಯಾಗಿ ಎರಡು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ ಪ್ರತಿ ತಾಲೂಕು ಕೇಂದ್ರದಲ್ಲೂ ಎರಡಕ್ಕಿಂತ ಹೆಚ್ಚು ಸುಸಜ್ಜಿತ ಆಂಬ್ಯುಲೆನ್ಸ್ ವ್ಯವಸ್ಥೆ ಇರಬೇಕು. ಜಿಲ್ಲೆಯಲ್ಲಿ ಪಿಪಿಇ ಕಿಟ್, ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಯಾವುದು ಕೂಡ ಕೊರತೆ ಆಗಬಾರದು. ಸ್ಟೆಪ್ ಅಪ್ ಆಸ್ಪತ್ರೆಗಳು, ಸಂಪೂರ್ಣ ವ್ಯವಸ್ಥೆಯೊಂದಿಗೆ ಎರಡು ದಿನಗಳಲ್ಲಿ ಸಿದ್ದವಾಗಿರಬೇಕು ಎಂದು ಸಚಿವರು ಹೇಳಿದರು.
ಪೊಲೀಸ್ ಇಲಾಖೆಯವರು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸುವಾಗ ಸ್ನೇಹಪೂರ್ವಕವಾಗಿ , ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂಗಡಿಗಳನ್ನು ಮುಚ್ಚಿಸಿ. ಗ್ರಾಮಪಂಚಾಯತಿಯ ಪಿ.ಡಿ.ಒ, ಅಧ್ಯಕ್ಷರು, ಉಪಾಧ್ಯಕ್ಷರು, ಅಲ್ಲಿನ ಅಧಿಕಾರಿಗಳು ಜವಾಬ್ದಾರಿವಹಿಸಿಕೊಂಡು ಕರೋನಾ ನಿಯಂತ್ರಣಕ್ಕೆ ಕ್ರಮವಹಿಸಲು ಗ್ರಾಮ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಜಿಲ್ಲಾ ಪಂಚಾಯತ್ ನ ಸಿ.ಇ.ಒ ಗೆ ಸಚಿವರು ಸೂಚನೆ ನೀಡಿದರು.
ಗ್ರಾಮ ಮಟ್ಟದಲ್ಲಿ ಆಟೋ ಪ್ರಚಾರದ ಮೂಲಕ ಜನಜಾಗೃತಿ ಮೂಡಿಸಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ. ಅಶ್ವಥಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ,ಜಿ.ಪಂ ಸಿ.ಇ.ಒ ಜುಲ್ಪಿಕರ್ ಉಲ್ಲಾ, ಅಪರ ಜಿಲ್ಲಾಧಿಕಾರಿ ಶೈಲಜಾ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಮೂರ್ತಿ ಮತ್ತು ಐಶ್ವರ್ಯ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.