ಮೆಡಿಕಲ್ ಕಿಟ್ ಪೂರೈಕೆ, ಚಿತಾಗಾರ ಸಮಸ್ಯೆ, ರೆಮಿಡಿಸ್ವೀರ್ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜತೆ ಡಿಸಿಎಂ ಚರ್ಚೆ
ಬೆಂಗಳೂರು:
ನಗರದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಅಥವಾ ಕೋವಿಡ್‌ಯೇತರ ಕಾರಣದಿಂದ ಯಾರೇ ಮೃತಪಟ್ಟರೂ ಕೂಡಲೇ ಮೃತ ದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರ ಮಾಡಿಸುವ ಕೆಲಸ ತ್ವರಿತವಾಗಿ ಆಗಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಒಂದು ವೇಳೆ ಮೃತದೇಹಗಳನ್ನು ನೀಡುವುದು ತಡ ಮಾಡಿದರೆ ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಿ ಎಂದು ಅವರು ಆದೇಶಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಕೋವಿಡ್ ನಿರ್ವಹಣೆ ಸಂಬಂಧ ಸಭೆ ನಡೆಸಿದ ಡಿಸಿಎಂ, ಆಸ್ಪತ್ರೆಗಳಿಂದ ಮೃತದೇಹಗಳನ್ನು ಸಂಬಂಧಿಕರಿಗೆ ತಡವಾಗಿ ನೀಡುತ್ತಿರುವುದರಿಂದ ಚಿತಾಗಾರಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಒಮ್ಮೆಗೇ ಮೃತದೇಹಗಳನ್ನು ತರುತ್ತಿರುವುದರಿಂದ ಅವುಗಳ ನಿರ್ವಹಣೆ ಕಷ್ಟ ಆಗುತ್ತಿದೆ. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಸೂಚಿಸಿದರು.
ಮೃತರ ಸಂಬಂಧಿಕರು ಮೊದಲೇ ದುಃಖದಲ್ಲಿರುತ್ತಾರೆ. ಅವರ ನೋವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಆಗಬಾರದು. ಕೂಡಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹವನ್ನು ಹಸ್ತಾಂತರ ಮಾಡಬೇಕು ಎಂದು ಅವರು ಹೇಳಿದರು. ಸಭೆಯಲ್ಲಿ ಚರ್ಚೆ ನಡೆಸಲಾದ ಅಂಶಗಳ ಬಗ್ಗೆ ತದನಂತರ ಡಿಸಿಎಂ ಮಾಧ್ಯಮಗಳಿಗೆ ವಿವರಿಸಿದರು.
ಗ್ಯಾಸ್ ಚಿತಾಗಾರ:
ನಗರದ 13 ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗಿರುವ ಕಾರಣ ಶವಸಂಸ್ಕಾರ ತಡ ಆಗುತ್ತಿದೆ. ತುರ್ತಾಗಿ ಮಾಡಬೇಕಾಗಿದೆ. ಹೀಗಾಗಿ ಪ್ರಾಯೋಗಿಕವಾಗಿ ಸುಮನಹಳ್ಳಿ ಮತ್ತು ಗಿಡ್ಡ ಹಳ್ಳಿಯಲ್ಲಿ ಗ್ಯಾಸ್ ಚಿತಾಗಾರಗಳನ್ನು ತುರ್ತಾಗಿ ತೆರೆಯಲು ಉದ್ದೇಶಿಸಲಾಗಿದೆ. ಇದು ಯಶಸ್ವಿಯಾದರೆ ಇತರೆ ಕಡೆಯೂ ಆ ವ್ಯವಸ್ಥೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಪ್ರತಿ ಚಿತಾಗಾರಕ್ಕೂ 15 ಸ್ಟ್ರೆಚರ್‌ಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ಚಿತಾಗಾರಕ್ಕೂ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಸಮಸ್ಯೆಗಳಿದ್ದರೆ ಬಗೆಹರಿಸಬೇಕು ಎಂದು ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿ ಆರೋಗ್ಯ ಸೇವಾ ಕೇಂದ್ರಕ್ಕೂ ಅನುದಾನ
ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಂಕಿತರಿಗೆ, ಅದರಲ್ಲೂ ಮನೆಯಲ್ಲೇ ಕ್ವಾರೆಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಕೊಡಮಾಡುವ ಮೆಡಿಕಲ್ ಕಿಟ್ ಕೊರತೆ ಉಂಟಾಗಿದೆ. ಕೂಡಲೇ ಈ ಕಿಟ್‌ಗಳನ್ನು ಖರೀದಿ ಮಾಡಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತಲಾ 2 ಲಕ್ಷ ರೂ. ನೀಡಲಾಗಿದೆ. ಇದು ಸಾಕಾಗುವುದಿಲ್ಲ. ಹೀಗಾಗಿ ವಿಧಾನಸಭಾ ಕ್ಷೇತ್ರವಾರು, ಬಿಬಿಎಂಪಿ ವಿಭಾಗವಾರು ಇನ್ನೂ ಹೆಚ್ವಿನ ಅನುದಾನ ಅಗತ್ಯ ಇದೆ. ತಕ್ಷಣ ಒದಗಿಸಬೇಕು ಎಂದು ಗೌರವ ಗುಪ್ತ ಅವರಿಗೆ ಸೂಚಿಸಿದರು. ಹಣ ಒದಗಿಸುವ ಭರವಸೆಯನ್ನು ಗುಪ್ತ ನೀಡಿದರು.
ಎಲ್ಲಿಯೂ ಕೋವಿಡ್ ಪೀಡಿತ ಜನರಿಗೆ ರೆಮಿಡಿಸ್ವೀರ್ ಸೇರಿ ಯಾವುದೇ ಔಷಧ ಅಥವಾ ಕಿಟ್‌ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಸಹಾಯವಾಣಿ 1912 ಸಂಖ್ಯೆಗೆ ಕೆರೆಗಳು ಹೆಚ್ಚಾಗಿವೆ. ಸಹಾಯವಾಣಿ ಕೇಂದ್ರದಲ್ಲಿ ಸದ್ಯಕ್ಕೆ ಕರೆ ಸ್ವೀಕರಿಸಲು 30 ಜನರಿದ್ದು, ಇನ್ನೂ 30 ಜನರನ್ನು ನಿಯೋಜಿಸುವಂತೆ ಸೂಚಿಸಿದ್ದೇನೆ. ಕರೆ ಮಾಡುವ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸಿ ಕೂಡಲೇ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ತಿಳಿಸಲಾಗುವುದು.
ರಾಜ್ಯದಲ್ಲಿ 7 ಕಡೆ ಕೋವಿಡ್ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಅಲ್ಲಿಂದ ಲಸಿಕೆ ಬಂದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟು ಸಮರ್ಪಕವಾಗಿ ವಿತರಣೆ ಮಾಡಬೇಕು. ದೆಹಲಿಯಲ್ಲಿ ಆದಂತೆ ಯಾವುದೇ ರೀತಿಯಲ್ಲೂ ವ್ಯತ್ಯಯ ಆಗಬಾರದು. ಇನ್ನೂ ರಾಜ್ಯದಲ್ಲಿ 280 ಆಸ್ಪತ್ರೆಗಳಿಂದ ರೆಮಿಡಿಸ್ವೀರ್ ಔಷಧಿಗೆ ಬೇಡಿಕೆ ಬಂದಿದೆ. ಆ ಬೇಡಿಕೆ ಅನುಸಾರ ಒದಗಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸಭೆಯಲ್ಲಿ ಗೌರವ ಗುಪ್ತ ಜತೆ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಔಷಧ ನಿಯಂತ್ರಣ ಇಲಾಖೆಯ ಉಪ ನಿರ್ದೇಶಕ ಸುರೇಶ್ ಮುಂತಾದವರು ಇದ್ದರು.