ಶಿವಮೊಗ್ಗ:
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೋವಿಡ್ ಮರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಬೆಂಗಳೂರಿನಿಂದ ಸಮಿತಿಯೊಂದನ್ನು ಕಳುಹಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲು ಸಭೆ ನಡೆಸಿದ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇದು ಮೂರನೇ ಹಂತದ ಆಸ್ಪತ್ರೆಯಾಗಿರುವುದರಿಂದ ಉತ್ಕøಷ್ಟವಾದ ಆರೋಗ್ಯ ಸೌಲಭ್ಯವಿಲ್ಲದ ನೆರೆ ಜಿಲ್ಲೆಗಳಿಂದಲೂ ಜನರು ಬರುತ್ತಿದ್ದಾರೆ. ಕೊನೆ ಗಳಿಗೆಯಲ್ಲಿ ಬಂದಿರುವ ಕೆಲ ರೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಸಾವಿನ ಪ್ರಮಾಣ ಹೆಚ್ಚಿದೆ. ಐಸಿಯು, ವೆಂಟಿಲೇಟರ್ ಸೇವೆ ಪಡೆಯುವವರಲ್ಲಿ ಹೆಚ್ಚಿನವರು ಕೊನೆ ಗಳಿಗೆಯಲ್ಲಿ ಬಂದಿರುತ್ತಾರೆ. 72 ಗಂಟೆಗಳಲ್ಲಿ ಸಾವಾಗಿರುವವರ ಪ್ರಮಾಣ ಶೇ.50 ಕ್ಕಿಂತ ಹೆಚ್ಚಿದೆ. ರೋಗಿಗಳು ತಡವಾಗಿ ಬಂದು ದಾಖಲಾಗಿದ್ದಾರೆ ಎಂಬುದು ಕಂಡುಬಂದಿದೆ ಎಂದರು.
ಆಸ್ಪತ್ರೆಯಲ್ಲಿ ಡೆತ್ ಆಡಿಟ್ ನಡೆಸಿ ವರದಿ ಸಲ್ಲಿಕೆಯಾಗಿದೆ. ಇದರ ಹೊರತಾಗಿಯೂ ಬೆಂಗಳೂರಿನಿಂದ ಒಂದು ಸಮಿತಿಯನ್ನು ಈ ಆಸ್ಪತ್ರೆಗೆ ಕಳುಹಿಸಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕವಾಸಕಿ ರೋಗಕ್ಕೆ ಒಳಗಾದ 2-3 ಪ್ರಕರಣ ಕಂಡುಬಂದಿದೆ. ಇಡೀ ಜಿಲ್ಲೆಯ ವಿವರ ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.
ರಾಜ್ಯದಲ್ಲಿ ಹೊಸ ವ್ಯವಸ್ಥೆ ತರಲು ಆದೇಶಿಸಲಾಗಿದೆ. ಪ್ರತಿ ಐಸಿಯು, ವಾರ್ಡ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ತರಲಾಗುತ್ತಿದೆ. ಸಿಬ್ಬಂದಿ ಅಥವಾ ವೈದ್ಯರು ಸಂಸ್ಥೆಯಿಂದ ಹೊರಗೆ 100 ಮೀಟರ್ ದೂರ ಹೋದರೆ ಈ ತಂತ್ರಜ್ಞಾನದಲ್ಲಿ ಗೊತ್ತಾಗುತ್ತದೆ. ಬಯೋಮೆಟ್ರಿಕ್ ನಲ್ಲಿ ಪಂಚ್ ಮಾಡಿ ಹೋದರೆ ಗೊತ್ತಾಗದೇ ಹೋಗಬಹುದು. ಆದರೆ ಈ ಹೊಸ ತಂತ್ರಜ್ಞಾನದಿಂದ ಕರ್ತವ್ಯದ ಅವಧಿಯಲ್ಲಿ ಹೊರಗೆ ಹೋದರೆ ತಿಳಿದುಬರುತ್ತದೆ ಎಂದು ತಿಳಿಸಿದರು.